ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಧಾನ ಸಲಹೆಗಾರ ಸ್ಥಾನಕ್ಕೆ ಪ್ರಶಾಂತ್ ಕಿಶೋರ್ ರಾಜೀನಾಮೆ

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ಪ್ರಶಾಂತ್ ಕಿಶೋರ್ ಅವರು “ಸಾರ್ವಜನಿಕ ಜೀವನದ ಸಕ್ರಿಯ ಪಾತ್ರದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ತಮ್ಮ ಮುಂದಿನ ಕ್ರಮದ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. ನಿಮಗೆ ತಿಳಿದಿರುವಂತೆ, ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವ ನನ್ನ ನಿರ್ಧಾರದಿಂದ, ನಿಮ್ಮ ಪ್ರಧಾನ ಸಲಹೆಗಾರನಾಗಿ ನಾನು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಮುಂದಿನ ಕ್ರಮದ ಬಗ್ಗೆ ನಾನು ಇನ್ನೂ ತೀರ್ಮಾನಿಸದ ಕಾರಣ, ಈ ಜವಾಬ್ದಾರಿಯಿಂದ ನನ್ನನ್ನು ಮುಕ್ತಗೊಳಿಸುವಂತೆ ವಿನಂತಿಸುತ್ತೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಗಳ ಕಚೇರಿಯು ಪ್ರಶಾಂತ್ ಕಿಶೋರ್ ಅವರ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರದ ಬಗ್ಗೆ ತಿಳಿದಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಅವರ ಉಮೇದುವಾರಿಕೆಯನ್ನು ಚುನಾವಣಾ ತಂತ್ರಜ್ಞರು ಬೆಂಬಲಿಸಿದ್ದಾರೆ ಎಂದು ವರದಿಗಳು ಬಂದಿರುವುದರಿಂದ ಪ್ರಶಾಂತ್ ಕಿಶೋರ್ ಅವರ ನಿರ್ಧಾರಕ್ಕೆ ಸಿಧು ಹಾಗೂ ಅಮರಿಂದರ್‌ ಸಿಂಗ್‌ ಅವರ ನಡುವಿನ ಹಳಸಿದ ಬಿಗಿಯಾದ ಸಂಬಂಧಗಳು ಕಾರಣವೆಂದು ಹೇಳಲಾಗುತ್ತಿದೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ವದಂತಿ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಶಾಂತ್ ಕಿಶೋರ್ ಕಳೆದ ತಿಂಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿದ್ದು ಈ ಊಹಾಪೋಹಗಳಿಗೆ ಕಾರಣವಾಗಿತ್ತು.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಕೂಡ ಪಕ್ಷದ ಹಿರಿಯ ನಾಯಕರೊಂದಿಗೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರುವ ಸಾಧಕ -ಬಾಧಕಗಳ ಬಗ್ಗೆ ಚಿಂತನೆ ನಡೆಸಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಊಹಾಪೋಹಗಳಿಗೆ ಕಾರಣವಾಗಿತ್ತು.
ಆದಾಗ್ಯೂ, ಈ ಕುರಿತು ಕಾಂಗ್ರೆಸ್‌ ಪಕ್ಷದಿಂದ ಅಥವಾ ಪ್ರಶಾಂತ್ ಕಿಶೋರ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ಪ್ರಶಾಂತ್ ಕಿಶೋರ್ ಅವರು ಚುನಾವಣಾ ಕಾರ್ಯತಂತ್ರಕಾರರಾಗಿ ಕೆಲಸ ತ್ಯಜಿಸುವುದಾಗಿ ಹೇಳಿದ್ದರು. ಪ್ರಶಾಂತ್ ಕಿಶೋರ್ ಕೆಲವು ವರ್ಷಗಳ ಹಿಂದೆ ಜನತಾದಳ (ಯುನೈಟೆಡ್) ಗೆ ಸೇರಿದ್ದರು, ಆದರೆ ನಿತೀಶ್ ಕುಮಾರ್ ನೇತೃತ್ವದ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಬೇರೆಯಾಗಿದ್ದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement