
ನವದೆಹಲಿ: ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಕ-ಯುವತಿಯರು ಸರ್ಕಾರಿ ಉದ್ಯೋಗಗಳಿಗಾಗಿ ಪರೀಕ್ಷೆ ಬರೆಯುತ್ತಾರೆ. ಆದರೆ ಅತ್ಯಂತ ಕಠಿಣವಾದ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವವರ ಪ್ರಮಾಣ ಶೇಕಡಾ 0.5 ಕ್ಕಿಂತಲೂ ಕಡಿಮೆ. ಇಂತಹ ತೀವ್ರ ಪೈಪೋಟಿಯ ನಡುವೆ, ಛತ್ತೀಸ್‌ಗಢದ ರಾಯ್ಪುರದ 23 ವರ್ಷದ ಯುವತಿ ಚಾರು ಪಾಂಡೆ ಬರೋಬ್ಬರಿ 19 ಸರ್ಕಾರಿ ಉದ್ಯೋಗದ ನೇಮಕಾತಿ ಪರೀಕ್ಷೆಗಳನ್ನು ಪಾಸ್ ಮಾಡುವ ಮೂಲಕ ಅದ್ಭುತ ದಾಖಲೆ ಬರೆದಿದ್ದಾರೆ.
ಅವರ ಈ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ‘ಅಟ್-ಹೋಮ್’ (At-Home) ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಅಲ್ಲಿ ಅವರಿಗೆ ರಾಷ್ಟ್ರಪತಿ ಗೌರವ ಸಿಗಲಿದೆ.
ಯಾವೆಲ್ಲಾ ಪರೀಕ್ಷೆಗಳಲ್ಲಿ ಪಾಸ್?
ಚಾರು ಪಾಂಡೆ ದೇಶದ ಪ್ರಮುಖ ನೇಮಕಾತಿ ಮಂಡಳಿಗಳು ನಡೆಸುವ ವಿವಿಧ ಹಂತದ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಚಾರು ಅವರು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸುವ ಎಸ್‌ಎಸ್‌ಸಿ ಸಿಜಿಎಲ್, ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್, ಎಸ್‌ಎಸ್‌ಸಿ ಎಂಟಿಎಸ್, ಎಸ್‌ಎಸ್‌ಸಿ ಜಿಡಿ ಮತ್ತು ಎಸ್‌ಎಸ್‌ಸಿ ಸಿಪಿಒ ಸೇರಿದಂತೆ ಹಲವು ಪ್ರಮುಖ ನೇಮಕಾತಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
ಅವರ ಈ ಯಶಸ್ಸು ಬ್ಯಾಂಕಿಂಗ್ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಐಬಿಪಿಎಸ್ ಪಿಒ, ಐಬಿಪಿಎಸ್ ಕ್ಲರ್ಕ್, ಎಸ್‌ಬಿಐ ಪಿಒ ಮತ್ತು ಎಸ್‌ಬಿಐ ಕ್ಲರ್ಕ್ ಪರೀಕ್ಷೆಗಳಲ್ಲೂ ಅವರು ಅರ್ಹತೆ ಪಡೆದಿದ್ದಾರೆ. ಇದರ ಜೊತೆಗೆ, ರೈಲ್ವೆ ನೇಮಕಾತಿ ಮಂಡಳಿ (RRB) ನಡೆಸುವ ಎನ್‌ಟಿಪಿಸಿ ಮತ್ತು ಗ್ರೂಪ್ ಡಿ ಪರೀಕ್ಷೆಗಳಲ್ಲೂ ಅವರು ಯಶಸ್ಸು ಸಾಧಿಸಿದ್ದಾರೆ.
ತೇರ್ಗಡೆಯಾಗಿರುವ 19 ಪರೀಕ್ಷೆಗಳ ಪಟ್ಟಿ :
ಎಸ್‌ಎಸ್‌ಸಿ ಸಿಜಿಎಲ್ (SSC CGL), ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್ (SSC CHSL), ಎಸ್‌ಎಸ್‌ಸಿ ಎಂಟಿಎಸ್, (SSC MTS), ಎಸ್‌ಎಸ್‌ಸಿ ಜಿಡಿ (SSC GD), ಎಸ್‌ಎಸ್‌ಸಿ ಸಿಪಿಒ (SSC CPO), ಐಬಿಪಿಎಸ್ ಪಿಒ (IBPS PO), ಐಬಿಪಿಎಸ್ ಕ್ಲರ್ಕ್ (IBPS Clerk), ಎಸ್‌ಬಿಐ ಪಿಒ (SBI PO), ಎಸ್‌ಬಿಐ ಕ್ಲರ್ಕ್ (SBI Clerk), ಆರ್‌ಆರ್‌ಬಿ ಎನ್‌ಟಿಪಿಸಿ (RRB NTPC), ಆರ್‌ಆರ್‌ಬಿ ಗ್ರೂಪ್ ಡಿ (RRB Group D), ಸಿಜಿ ಎಸ್‌ಐ (CG SI – ಛತ್ತೀಸ್‌ಗಢ ಸಬ್ ಇನ್ಸ್‌ಪೆಕ್ಟರ್), ದೆಹಲಿ ಪೊಲೀಸ್ (Delhi Police), ಸಿಜಿ ಎನ್‌ಎಚ್‌ಎಂ (CG NHM), ಟ್ರಾನ್ಸ್‌ಪೋರ್ಟ್ ಸಬ್ ಇನ್ಸ್‌ಪೆಕ್ಟರ್ (Transport Sub Inspector), ಎಸ್‌ಎಸ್‌ಸಿ ಸಿಜಿಎಲ್ – 2023 (SSC CGL 2023), ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್ – 2023 (SSC CHSL 2023), ಎಸ್‌ಎಸ್‌ಸಿ ಎಂಟಿಎಸ್ – 2023 (SSC MTS 2023), ಆರ್‌ಆರ್‌ಬಿ ಗ್ರೂಪ್ ಡಿ – 2023 (RRB Group D 2023) ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.
ಚಾರು ಪಾಂಡೆ ಯಶಸ್ಸಿನ ಸೂತ್ರವೇನು?
ಪ್ರಸ್ತುತ ಚೆನ್ನೈನಲ್ಲಿರುವ ಭಾರತೀಯ ಮಹಾಲೇಖಪಾಲರ (CAG) ಕಚೇರಿಯಲ್ಲಿ ಅಸಿಸ್ಟೆಂಟ್ ಆಡಿಟರ್ (ಸಹಾಯಕ ಲೆಕ್ಕಪರಿಶೋಧಕಿ) ಆಗಿ ಕಾರ್ಯನಿರ್ವಹಿಸುತ್ತಿರುವ 23 ವರ್ಷದ ಚಾರು ಪಾಂಡೆ ಅವರು, ತಮ್ಮ ಯಶಸ್ಸಿಗೆ ನಿರಂತರ ತಯಾರಿ ಮತ್ತು ಸಮಯ ಪ್ರಜ್ಞೆಯೇ ಕಾರಣ ಎನ್ನುತ್ತಾರೆ.
“ನಾನು 19 ಪರೀಕ್ಷೆಗಳನ್ನು ಪಾಸ್ ಮಾಡುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಒಂದು ಒಳ್ಳೆಯ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನನ್ನ ಗುರಿಯಾಗಿತ್ತು. ನನ್ನ ಓದಿನಲ್ಲಿ ಸಮಯ ನಿರ್ವಹಣೆ (Time Management) ಅತ್ಯಂತ ಪ್ರಮುಖ ಪಾತ್ರ ವಹಿಸಿತು. ನಾನು ಇಡೀ ಪಠ್ಯಕ್ರಮವನ್ನು ಮುಗಿಸಬೇಕು ಎಂಬ ಧಾವಂತಕ್ಕೆ ಬೀಳಲಿಲ್ಲ. ಬದಲಿಗೆ, ಎಷ್ಟು ಓದಿದರೂ ಅದನ್ನು ಶೇ. 100 ರಷ್ಟು ಪರಿಪೂರ್ಣವಾಗಿ ಓದುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ನಾನು ಹೇಳುವುದಿಷ್ಟೇ; ಒಮ್ಮೆ ಪರೀಕ್ಷೆ ಫೇಲ್ ಆದರೂ ಧೃತಿಗೆಡದೆ ಮತ್ತೊಮ್ಮೆ ಪ್ರಯತ್ನಿಸಿ. ಪ್ರತಿ ಬಾರಿಯ ಪ್ರಯತ್ನದಲ್ಲೂ ನಾವು ಹೊಸದನ್ನೇನಾದರೂ ಕಲಿತುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ನಾನು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಶಿಕ್ಷಕಿ ಅಥವಾ ಪ್ರೊಫೆಸರ್ ಆಗಬೇಕು ಎಂಬುದು ನನ್ನ ತಂದೆ-ತಾಯಿ ಆಸೆಯಾಗಿತ್ತು. ಆದರೆ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಹಾದಿಯನ್ನು ಆರಿಸಿಕೊಂಡೆ. ನನ್ನ ಈ ನಿರ್ಧಾರಕ್ಕೆ ಕುಟುಂಬದವರು ಸಂಪೂರ್ಣ ಬೆಂಬಲ ನೀಡಿದರು. ಶಾಲೆಯ ದಿನಗಳಲ್ಲಿ ನಾನು ಗಣಿತದಲ್ಲಿ ಸಾಕಷ್ಟು ಮುಂದಿದ್ದೆ, ಆದರೆ ಉಳಿದ ವಿಷಯಗಳಲ್ಲಿ ನನ್ನನ್ನು ಒಬ್ಬ ಸಾಧಾರಣ ವಿದ್ಯಾರ್ಥಿನಿ ಎಂದೇ ಭಾವಿಸಿದ್ದೆ. ಆದರೆ, ಯಶಸ್ಸು ಎಂಬುದು ಕೇವಲ ಪ್ರತಿಭೆಯಿಂದ ಮಾತ್ರ ಬರುವುದಿಲ್ಲ, ಬದಲಿಗೆ ನಿರಂತರ ಪರಿಶ್ರಮ ಮತ್ತು ಶಿಸ್ತಿನಿಂದ ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ,” ಎಂದು ಚಾರು ಹೇಳಿದ್ದಾರೆ.
“ಪ್ರಸ್ತುತ ಚೆನ್ನೈನಲ್ಲಿ ಸಹಾಯಕ ಲೆಕ್ಕಪರಿಶೋಧಕಿಯಾಗಿ (Assistant Auditor) ಕೆಲಸ ಮಾಡುತ್ತಿದ್ದೇನೆ. ನನಗೆ ಪ್ರವಾಸ ಮಾಡುವುದು ಮತ್ತು ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟ ಕುಟುಂಬದವರೊಂದಿಗೆ 5 ರಿಂದ 10 ದಿನಗಳ ಕಾಲ ಪ್ರವಾಸಕ್ಕೆ ಹೋಗಿ ಬರುತ್ತಿದ್ದೆ. ಭವಿಷ್ಯದಲ್ಲಿ ಪಿಎಚ್‌ಡಿ (PhD) ಮಾಡುವ ಹಂಬಲ ನನಗಿದೆ. ಹಾಗೆಯೇ, ಸಮಯ ಸಿಕ್ಕಾಗ ಯುಪಿಎಸ್‌ಸಿ (UPSC) ಪರೀಕ್ಷೆಗೂ ಸಿದ್ಧತೆ ನಡೆಸಬೇಕೆಂಬ ಹಂಬಲವಿದೆ,” ಎಂದು ಚಾರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಹಣಕಾಸು ಕ್ಷೇತ್ರದ ಮೇಲಿನ ತಮ್ಮ ಆಸಕ್ತಿಯ ಬಗ್ಗೆ ಮಾತನಾಡಿದ ಚಾರು, “ನನಗೆ ಮೊದಲಿನಿಂದಲೂ ಗಣಿತ ಎಂದರೆ ತುಂಬಾ ಇಷ್ಟ. ಇದರ ಜೊತೆಗೆ, ನಾವು ಪಾವತಿಸುವ ಇಷ್ಟೊಂದು ದೊಡ್ಡ ಮೊತ್ತದ ತೆರಿಗೆ ಹಣವು ವಾಸ್ತವವಾಗಿ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಬೇಕು ಎಂಬ ಕುತೂಹಲ ನನಗಿತ್ತು,” ಎಂದು ತಿಳಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ