ಶಾಸಕ ಜಮೀರ್ ಅಹಮದ್ ಮನೆ ಮೇಲೆ ಇಡಿ ದಾಳಿ: ೨೩ ಗಂಟೆಗಳ ಕಾಲ ದಾಖಲೆಗಳ ಹುಡುಕಾಟ

posted in: ರಾಜ್ಯ | 0

ಬೆಂಗಳೂರು: ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಇಡಿ ರೇಡ್ ೨೩ ಗಂಟೆಗಳ ಬಳಿಕ ಜಮೀರ್ ಮನೆಯಿಂದ ಅಧಿಕಾರಿಗಳು ದಾಳಿ ಮುಗಿಸಿ ಹೊರಹೋಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ನಾಲ್ಕು ಕಾರುಗಳಲ್ಲಿ ಬಂದಿದ್ದ ಇಡಿ ಅಧಿಕಾರಿಗಳ ತಂಡ ಸಿ.ಆರ್.ಪಿ.ಎಫ್. ಸಿಬ್ಬಂದಿಯೊಂದಿಗೆ ದಾಖಲೆಗಳ ಸಮೇತ ನಿರ್ಗಮಿಸಿದೆ. ಬಹಳಷ್ಟು ಮಹತ್ವದ ದಾಖಲೆಗಳ ಸಮೇತವಾಗಿ ಇಡಿ ಅಧಿಕಾರಿಗಳು ದಾಳಿ ಮುಗಿಸಿ ಇಂದು ನಿರ್ಗಮಿಸಿದ್ದಾರೆ.

ವಿಚಾರಣೆಗೆ ಕರೆದಾಗ ಬರಲು ಸೂಚನೆ..?

ಇಡಿ ಅಧಿಕಾರಿಗಳು ದಾಳಿ ಬಳಿಕ ತಾವು ವಿಚಾರಣೆಗೆ ಕರೆದ ತಕ್ಷಣ ಹಾಜರಾಗಬೇಕು ಎಂದು ಶಾಸಕ ಜಮೀರಅಹ್ಮದ ಖಾನ್ ಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇಡಿ ನನಗೆ ನೋಟೀಸ್ ಕೊಟ್ಟಿಲ್ಲ:

ಇಡಿ ರೇಡ್ ಮುಗಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕ ಜಮೀರ್ ಅಹಮದ್, ನಾನು ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಸದ್ಯ ದಾಖಲೆ ಪರಿಶೀಲಿಸಿದರು. ತಮಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿಲ್ಲ. ನನ್ನ ಮನೆ ವಿಚಾರಕ್ಕೆ ಹಲವು ದೂರು ಬಂದಿದೆ, ಅದಕ್ಕೆ ಬಂದಿದ್ದಾರೆ. ನಾನು ನನ್ನ ಮನೆಯನ್ನು ಸಂಪೂರ್ಣವಾಗಿ ಅಧಿಕೃತ ಹಣದಿಂದಲೇ ಕಟ್ಟಿದ್ದೇನೆ. ಎಲ್ಲಾ ದಾಖಲೆ ತೋರಿಸಿದ್ದೇನೆ, ವ್ಯಾಲ್ಯುಯೇಶನ್ ಮಾಡಿದ್ದಾರೆ. ನಾನು ನೀಡಿದ ದಾಖಲೆಗೆ ಸಮಾಧಾನ ಆಗಿ ಹೋಗಿದ್ದಾರೆ. ಇಡಿ ಅಧಿಕಾರಿಗಳು ಮನೆಯನ್ನು ಸಂಪೂರ್ಣವಾಗಿ ಸರ್ಚ್ ಮಾಡಿದ್ದಾರೆ, ನನ್ನ ಹಾಗೂ ನನ್ನ ಸಹೋದರರ ಮನೆಯಲ್ಲೂ ಸರ್ಚ್ ಮಾಡಿದ್ದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಮನೆ ಯಾವಾಗ ತಗೊಂಡ್ರಿ, ಪೇಮೆಂಟ್ ಹೇಗೆ ಮಾಡಿದಿರಿ ಎಂದು ಕೇಳಿದರು. ಸಂಬಂಧಿಸಿದ ದಾಖಲೆ ನೀಡಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

ನನ್ನ ಮನೆಗೆ ಮಾಡಿದ ವೆಚ್ಚ ಕುರಿತು ಹಲವರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಎಸ್.ಬಿ.ಐ. ಜನತಾ ಬ್ಯಾಂಕ್ ಸೇರಿ ಮೂರು ಬ್ಯಾಂಕ್ ಗಳಲ್ಲಿನ ನನ್ನ ಖಾತೆಗಳನ್ನು ಪರಿಶೀಲಿಸಿದ್ದಾರೆ. ನಾನು ಶ್ರಮವಹಿಸಿ ಏಳು ವರ್ಷದಿಂದ ಮನೆ ನಿರ್ಮಾಣ ಮಾಡಿದ್ದೇನೆ. ಎಲ್ಲರಿಗೂ ಮನೆ ಮೇಲೆ ಹಾಗೂ ನನ್ನ ಮೇಲೆ ಕಣ್ಣು. ರಾಜಕೀಯದಲ್ಲಿ ಶತ್ರುಗಳು ಸಹಜ. ದೂರು ನೀಡಿದ್ದು ಒಳ್ಳೆದಾಯ್ತು. ಇವತ್ತಲ್ಲ ನಾಳೆ ಇದು ಆಗಲೇಬೇಕಾಗಿತ್ತು. ಅದು ಈಗ ಕ್ಲಿಯರ್ ಆಗಿದೆ ಎಂದರು.

ಐಎಂಎ ವಿಚಾರವಾಗಿ ಅಧಿಕಾರಿಗಳು ನನ್ನನ್ನು ಏನೂ ಕೇಳಿಲ್ಲ. ಮನೆ ನಿರ್ಮಾಣಕ್ಕೆ ಮಾಡಿದ ವೆಚ್ಚ ಕುರಿತು ದಾಖಲೆ ಕೇಳಿದ್ದು, ಅವುಗಳನ್ನೆಲ್ಲ ನೀಡಿರುವುದಾಗಿ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement