ಟೋಕಿಯೊ ಒಲಿಂಪಿಕ್ಸ್‌: ಕನ್ನಡತಿ ಅದಿತಿಗೆ ಪದಕ ಜಸ್ಟ್ ಮಿಸ್, ಗಾಲ್ಫಲ್ಲಿ ಭಾರತ ಹೊಸ ದಾಖಲೆ

ಟೋಕಿಯೋ:ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದಾರೆ. ಆದರೂ, ದಾಖಲೆ ಬರೆದಿದ್ದಾರೆ.
ವಿಶ್ವದಲ್ಲಿ 200ನೇ ಸ್ಥಾನ ಪಡೆದಿದ್ದ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಒಲಿಂಪಿಕ್ಸ್ ನಲ್ಲಿ ನಾಲ್ಕನೇಯ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.
ನಿನ್ನೆ ನಡೆದ ಮೂರನೇ ಸುತ್ತಿನ ಬಳಿಕ ಪದಕದ ನಿರೀಕ್ಷೆ ಮೂಡಿಸಿದ್ದ ಗಾಲ್ಫರ್ ಅದಿತಿ ಅಶೋಕ್ ಇಂದು ಕೂದಲೆಳೆಯ ಅಂಚಿನಲ್ಲಿ ಪದಕವನ್ನು ಕಳೆದುಕೊಂಡು ನಾಲ್ಕನೇಯ ಸ್ಥಾನವನ್ನು ಪಡೆದರು.
ಇಂದು (ಶನಿವಾರ) ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಬಳಿಕ ಜಂಟಿ ಮೂರನೇ ಸ್ಥಾನವನ್ನು ನ್ಯೂಜಿಲೆಂಡ್​ನ ಲೈಡಿಯಾ ಕೊ ಜೊತೆ ಗಳಿಸಿಕೊಂಡ ಕಾರಣ ಟೈ ಆಗಿತ್ತು. ಈ ವೇಳೆ ಮಳೆ ಬಂದ ಕಾರಣ ಪಂದ್ಯ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪುನಃ ಆರಂಭಗೊಂಡು ಫೈನಲ್ ರೌಂಡ್ ನಡೆಯಿತು. ಈ ಸುತ್ತಿನಲ್ಲಿ ಅದಿತಿ 2 ಸ್ಥಾನ ಕುಸಿತಗೊಂಡು ಅಂತಿಮವಾಗಿ 4ನೇ ಸ್ಥಾನ ಪಡೆದುಕೊಂಡರು.
ಒಟ್ಟು 71 ಯತ್ನಗಳಲ್ಲಿ ಎಲ್ಲ 18 ಗುಂಡಿಗಳಿಗೆ ಬಾಲನ್ನು ಹಾಕಬೇಕು. ಅದಿತಿ ಮೊದಲ ಸುತ್ತಿನಲ್ಲಿ 67, ಎರಡನೇ ಸುತ್ತಿನಲ್ಲಿ 66, ಮೂರನೇ ಸುತ್ತಿನಲ್ಲಿ 68, ಇಂದು ನಡೆದ 4 ನೇ ಸುತ್ತಿನಲ್ಲಿ 68 ಯತ್ನಗಳಲ್ಲಿಗುಂಡಿಗೆ ಚೆಂಡನ್ನು ಹಾಕಿದರು.
ಬೆಂಗಳೂರಿನ ಯುವತಿ ಅಂತರಾಷ್ಟ್ರಿಯ ಮಟ್ಟದಲ್ಲಿ ಮಿಂಚಿದ್ದು ಗಮನಾರ್ಹವಾಗಿತ್ತು. ಅಂತಿಮ ಸುತ್ತಿನ ಪಂದ್ಯದಲ್ಲಿ 5, 6, 8, 13 ಮತ್ತು 14 ಗುಳಿಗಳಿಗೆ ಚಂಡನ್ನು ಯಶಸ್ವಿಯಾಗಿ ತಲುಪಿಸಿದ್ದರು. 9 ಮತ್ತು 11ನೇ ಬೋಗಿಗಳಲ್ಲಿ ವಿಫಲರಾದರು. ಜಪಾನಿನ ಮೋನೆ ಇನಾಮಿ ಮತ್ತು ನ್ಯೂಜಿಲ್ಯಾಂಡ್‍ನ ಲ್ಯಾಡಿಯಾ ಕೋ ಅವರು ಪರಸ್ಪರ 16 ಅಂಕ ಪಡೆದು ಸಮಬಲ ಸಾಧಿಸಿದರು. ಪ್ಲೆ ಆಫ್ ಸುತ್ತು ಗೆಲುವನ್ನು ನಿರ್ಧಾರ ಮಾಡಿತ್ತು. ಇನಾಮಿ ಬೆಳ್ಳಿ, ಕೋ ಕಂಚು ಪಡೆದುಕೊಂಡರು. ನಿಲ್ಲೆ ಕೋರ್ಡ್‌ ಚಿನ್ನ ಗೆದ್ದಿದ್ದಾರೆ.
ಅದಿತಿ ಕರ್ನಾಟಕದ ಕುವರಿಯಾಗಿದ್ದು ಅವರ ತಂದೆ ಅಶೋಕ್ ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದವರು. ಹಲವಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆಕೆ ಸೆಮಿಫೈನಲ್‌ ತಲುಪುತ್ತಿದ್ದಂತೆ ಜಮಖಂಡಿಯಲ್ಲಿ ಸಂಭ್ರಮಾಚರಣೆ ನಡೆದಿತ್ತು.
ಅದಿತಿ ಅವರ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಎಲ್ಲಾ ಭಾರತೀಯರಿಗಿಂತ ಅಧಿತಿ ಹೆಚ್ಚು ದೂರ ಕ್ರಮಿಸಿದ್ದಾರೆ. ಚೆನ್ನಾಗಿ ಆಟ ಆಡಿ ಅವರು ತೋರಿಸಿದ ಕೌಶಲ್ಯ ಎಲ್ಲರ ಮನಸ್ಸನ್ನು ಗೆದ್ದಿದೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement