ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಸಂತ್ರಸ್ತೆ ಪೋಷಕರ ಫೋಟೋ ಹಂಚಿಕೊಂಡ ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಟ್ವಿಟರ್‌ ಕ್ರಮ

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊ ಜೊತೆಗೆ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಮಾಡಿದ್ದ ಪೋಸ್ಟ್‌ ಅನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ ತನ್ನ ವೇದಿಕೆಯಿಂದಲೇ ತೆಗೆದು ಹಾಕಿದೆ.
‘ಈ ಟ್ವೀಟ್‌ ಇನ್ನು ಮುಂದೆ ಲಭ್ಯವಿರುವುದಿಲ್ಲ’ ಎಂಬ ಪಟ್ಟಿಯನ್ನು ಇದಕ್ಕೆ ಟ್ವಿಟರ್‌ ಲಗತ್ತಿಸಿದೆ.
ದೆಹಲಿಯ ಓಲ್ಡ್‌ ನಂಗಲ್‌ ಏರಿಯಾ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಂದ ಮತ್ತು ಸಂತ್ರಸ್ತೆಯನ್ನು ಪೋಷಕರ ಅನುಮತಿ ಇಲ್ಲದೇ ದಹಿಸಿದ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು.
ಈ ಬಗ್ಗೆ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ, ‘ಹೆತ್ತವರ ಕಣ್ಣೀರು ಒಂದು ವಿಷಯವನ್ನು ಹೇಳುತ್ತಿದೆ. ಅವರ ಮಗಳು, ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು. ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ,’ ಎಂದು ಬರೆದುಕೊಂಡಿದ್ದರು. ಆದರೆ, ಟ್ವೀಟ್‌ನಲ್ಲಿ ಸಂತ್ರಸ್ತೆ ಕುಟುಂಬಸ್ಥರ ಫೋಟೊಗಳನ್ನೂ ಹಂಚಿಕೊಂಡಿದ್ದರು. ಈ ಮೂಲಕ ಸಂತ್ರಸ್ತೆ ಕುಟುಂಬಸ್ಥರ ಗುರುತು ಬಹಿರಂಗಪಡಿಸಿದ ವಿವಾದ ರಾಹುಲ್‌ ಅವರಿಗೆ ಸುತ್ತಿಕೊಂಡಿತ್ತು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಸಂತ್ರಸ್ತೆ ಕುಟುಂಬದ ಫೋಟೊವನ್ನು ಪೋಸ್ಟ್ ಮಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಬುಧವಾರ ದೆಹಲಿ ಪೊಲೀಸ್ ಮತ್ತು ಟ್ವಿಟರ್‌ಗೆ ಆಗ್ರಹಿಸಿ ನೋಟಿಸ್‌ ನೀಡಿತ್ತು. ಇದು ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಲ್ಲಿ ಅಪರಾಧ ಎಂದು ಹೇಳಿತ್ತು.
ಈ ಕಾರಣಕ್ಕೆ ಟ್ವೀಟರ್‌ ಸಂಸ್ಥೆ ರಾಹುಲ್‌ ಟ್ವೀಟ್‌ ವಿರುದ್ಧ ಕ್ರಮ ಕೈಗೊಂಡಿದೆ. ಟ್ವೀಟ್ ಮೇಲೆ ಕ್ಲಿಕ್ ಮಾಡಿದರೆ, “ಈ ಟ್ವೀಟ್ ನಿಯಮಗಳನ್ನು ಉಲ್ಲಂಘಿಸಿದೆ” ಎಂಬ ಸಂದೇಶ ಬರುತ್ತದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement