
ಬೆಂಗಳೂರು: ಸಿನಿಮಾ ಶೂಟಿಂಗ್ ವೇಳೆ ಅವಘಡವೊಂದು ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಈ ಪ್ರಕರಣ ಸಂಬಂಧ ಚಿತ್ರ ನಿರ್ದೇಶಕ ಆರ್.ಶಂಕರ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಫೈಟರ್ ವಿವೇಕ್ ಮೃತಪಟ್ಟ ಪ್ರಕರಣದ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್, ಇನ್ಸ್ ಪೆಕ್ಟರ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸ್ಟಂಟ್ ಮಾಸ್ಟರ್ ಸೇರಿದಂತೆ ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆದಿದ್ದಂತ ಪೊಲೀಸರು, ಈಗ ಲವ್ ಯೂ ರಚ್ಚು ಸಿನಿಮಾ ನಿರ್ದೇಶಕ ಆರ್.ಶಂಕರ್ ಅವರನ್ನು ಕೂಡ ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.
‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ವೇಳೆ ದುರಂತ ನಡೆದಿದ್ದು ಫೈಟರ್ ವಿವೇಕ್ ಎಂಬವರು ವಿದ್ಯುತ್ ತಂತಿ ಸ್ಪರ್ಶವಾಗಿ ಮೃತಪಟ್ಟಿದ್ದಾರೆ.
ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ರೋಪ್ ಎಳೆಯುವಾಗ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯುತ್ ತಂತಿಗೆ ರೋಪ್ ಸ್ಪರ್ಷಿಸಿದ ಕಾರಣವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ನಟ ಅಜಯ್ ರಾವ್, ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಇರಲಿಲ್ಲ. ಜಾಕೆಟ್ ಹಾಕಿದ್ದವನಿಗೂ ಶಾಕ್ ಹೊಡೆದಿದೆ’ ಎಂದು ತಿಳಿಸಿದ್ದಾರೆ.
‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಅಜಯ್ ರಾವ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ರಚಿತಾ ರಾಮ್ ಚಿತ್ರದ ನಾಯಕಿ. ಶಂಕರ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗುರು ದೇಶಪಾಂಡೆ ಚಿತ್ರದ ನಿರ್ಮಾಪಕ. ಮಣಿಕಾಂತ್ ಕದ್ರಿ ಅವರು ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.



ನಿಮ್ಮ ಕಾಮೆಂಟ್ ಬರೆಯಿರಿ