ನವದೆಹಲಿ: 2020ರ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಘೋಷಿಸಲು ಮತ್ತು ಪ್ರಚಾರ ಮಾಡಲು ವಿಫಲವಾದ ಎಂಟು ರಾಜಕೀಯ ಪಕ್ಷಗಳನ್ನು ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಯ ಅಪರಾಧಿಯೆಂದು ಪರಿಗಣಿಸಿದೆ. ತಪ್ಪಿತಸ್ಥರಾಗಿರುವ ರಾಜಕೀಯ ಪಕ್ಷಗಳಲ್ಲಿ ಜನತಾದಳ (ಯುನೈಟೆಡ್), ರಾಷ್ಟ್ರೀಯ ಜನತಾದಳ, ಲೋಕ ಜನಶಕ್ತಿ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷ ಸೇರಿವೆ.
ಸಿಪಿಐ (ಎಂ) ಮತ್ತು ಎನ್ ಸಿಪಿಗೆ ತಲಾ 5 ಲಕ್ಷ ದಂಡ ವಿಧಿಸಿದರೆ, ಉಳಿದವರಿಗೆ ತಲಾ 1 ಲಕ್ಷ ದಂಡ ವಿಧಿಸಲಾಗಿದೆ.
ಈ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ವ್ಯಾಪಕವಾಗಿ ಪ್ರಸಾರವಾಗುವ ಪತ್ರಿಕೆಗಳು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆ ಫೆಬ್ರವರಿ 13, 2020 ರ ದಿನಾಂಕ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ಜೆಡಿಯು, ಆರ್‌ಜೆಡಿ, ಎಲ್‌ಜೆಪಿ, ಬಿಜೆಪಿ, ಸಿಪಿಐ ಮತ್ತು ಐಎನ್‌ಸಿ ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಪ್ರಕಟಿಸಿದ್ದವು ಆದರೆ ಕಡಿಮೆ ಪ್ರಸರಣ ಪತ್ರಿಕೆಗಳಲ್ಲಿ ಮಾತ್ರ ಪ್ರಕಟಿಸಿದ್ದವು, ಸಿಪಿಐ (ಎಂ) ಮತ್ತು ಎನ್‌ಸಿಪಿ ಸರ್ವೋಚ್ಚ ನ್ಯಾಯಾಲಯದ ಎಲ್ಲಾ ನಿರ್ದೇಶನಗಳನ್ನು ಅನುಸರಿಸಲು ವಿಫಲವಾಗಿವೆ ಎಂದು ನ್ಯಾಯಾಲಯ ಹೇಳಿದೆ.
ಈ ಕಾರಣದಿಂದಲೇ ಅವರಿಗೆ ಐದು ಲಕ್ಷರು.ಗಳಷ್ಟು ದಂಡವನ್ನು ಐದು ವಾರಗಳಲ್ಲಿ- ಇತರ ಆರು ಪಕ್ಷಗಳಿಗೆ ಒಂದು ಲಕ್ಷ ರೂ. ದಂಡವನ್ನು ನಾಲ್ಕು ವಾರಗಳಲ್ಲಿ ಪಾವತಿಸಲು ಸೂಚಿಸಲಾಗಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಆಯ್ಕೆ ಮಾಡಿದ 48 ಗಂಟೆಗಳಲ್ಲಿ ಘೋಷಿಸಲು ಸೂಚಿಸಿತು.
ನ್ಯಾಯಮೂರ್ತಿಗಳಾದ ಆರ್. ಎಫ್. ನಾರಿಮನ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠವು ಫೆಬ್ರವರಿ 13, 2020 ರ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ತಿದ್ದುಪಡಿ ಮಾಡಿದೆ.
ಅಭ್ಯರ್ಥಿಗಳ ಆಯ್ಕೆಯ 48 ಗಂಟೆಗಳ ಒಳಗೆ ಅಥವಾ ನಾಮಪತ್ರಗಳನ್ನು ಸಲ್ಲಿಸುವ ಮೊದಲ ದಿನಾಂಕಕ್ಕಿಂತ ಎರಡು ವಾರಗಳಿಗಿಂತ ಮುಂಚಿತವಾಗಿ, ಯಾವುದು ಮುಂಚಿನದು ಎಂಬುದನ್ನು ವಿವರಗಳನ್ನು ಪ್ರಕಟಿಸಲು ನ್ಯಾಯಾಲಯವು ಮೊದಲು ಅನುಮತಿ ನೀಡಿತ್ತು.
ಆದಾಗ್ಯೂ, ನ್ಯಾಯಾಲಯವು ಮಂಗಳವಾರ ಆದೇಶವನ್ನು ತಿದ್ದುಪಡಿ ಮಾಡಿತು ಮತ್ತು ಅಭ್ಯರ್ಥಿಗಳು ಆಯ್ಕೆಯಾದ 48 ಗಂಟೆಗಳಲ್ಲಿ ಅಗತ್ಯವಿರುವ ವಿವರಗಳನ್ನು ಈಗ ಪಕ್ಷಗಳು ಪ್ರಕಟಿಸಬೇಕು ಎಂದು ಹೇಳಿದೆ.
ನವೆಂಬರ್ 2020 ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಪ್ರಕಟಿಸಲು ವಿಫಲವಾದ ಕಾರಣಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗಳ ಮೇಲೆ ಸುಪ್ರೀಂಕೋರ್ಟ್ ತೀರ್ಪು ನೀಡಿತು.
ನಿಮ್ಮ ಕಾಮೆಂಟ್ ಬರೆಯಿರಿ