ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಶಾಕ್: ಆಯ್ಕೆಯಾದ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ 48 ಗಂಟೆಯೊಳಗೆ ಪ್ರಕಟಿಸುವಂತೆ ನಿರ್ದೇಶನ

ನವದೆಹಲಿ: ರಾಜಕೀಯದಲ್ಲಿ ಅಪರಾಧ ಹಿನ್ನೆಲೆ ಇರುವವರ ಸಂಖ್ಯೆ ಹೆಚ್ಚುತ್ತಿರುವ ಕಳವಳ ವ್ಯಕ್ತವಾದ ಬೆನ್ನಲ್ಲೇ ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಮಹತ್ವದ ನಿರ್ದೇಶನ ಹೊರಡಿಸಿದೆ.
ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಮೇಲೆ ಯಾವುದಾದರೂ ಕ್ರಿಮಿನಲ್ ಪ್ರಕರಣಗಳಿದ್ದರೆ ಅದನ್ನ ಆ ಅಭ್ಯರ್ಥಿಯ ಆಯ್ಕೆಯಾದ 48 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಹೊರಡಿಸಿದೆ. ಈ ಮೂಲಕ ರಾಜಕೀಯ ಪಕ್ಷಗಳಿಗೆ ಬಿಗ್ ಶಾಕ್ ನೀಡಿದೆ.
ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಇದೇ ವಿಚಾರದಲ್ಲಿ ಇದೇ ರೀತಿಯ ತೀರ್ಪು ನೀಡಿತ್ತು. ರಾಜಕೀಯ ಪಕ್ಷಗಳು ಅಭ್ಯರ್ಥಿ ಮೇಲೆ ಕ್ರಿಮಿನಲ್ ಪ್ರಕರಣ ಇದ್ದರೆ ಅದರ ಮಾಹಿತಿಯನ್ನ 48 ಗಂಟೆಯೊಳಗೆ ಪ್ರಕಟಿಸಬೇಕು. ಅಥವಾ ನಾಮಪತ್ರ ಸಲ್ಲಿಕೆಯ ದಿನಕ್ಕೆ 2 ವಾರ ಮುಂಚಿತವಾಗಿ ಪ್ರಕಟಿಸಬೇಕು ಎಂದು ತನ್ನ ತೀರ್ಪಿನ 4.4 ಪ್ಯಾರಾಗ್ರಾಫ್ನಲ್ಲಿ ನ್ಯಾಯಪೀಠ ತಿಳಿಸಿತ್ತು. ಇದೀಗ ಎರಡನೇ ಅಂಶವನ್ನು ಕೈಬಿಡಲಾಗಿದ್ದು, ಎರಡು ದಿನದೊಳಗೆ ಅಭ್ಯರ್ಥಿಯ ಕ್ರಿಮಿನಲ್ ಮಾಹಿತಿಯನ್ನು ಪ್ರಕಟಿಸಬೇಕು ಎಂದು ತಿಳಿಸಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನ ಪ್ರಕಟಿಸಿಲ್ಲ. ಈ ಮೂಲಕ 2020, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಾಗಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನ ಹೊರಡಿಸಿದೆ. ಇದರ ಜೊತೆಗೆ, ಇನ್ನೂ ಕೆಲ ಹೊಸ ನಿರ್ದೇಶನಗಳನ್ನ ನೀಡಿದೆ.
ರಾಜಕೀಯ ಪಕ್ಷಗಳು ಒಂದು ವೇಳೆ ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದರೆ ಅದಕ್ಕೆ ಕಾರಣ ನೀಡಬೇಕು. ಇಂಥ ಅಭ್ಯರ್ಥಿಯ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಹಾಗೂ ಅವರನ್ನ ಯಾಕೆ ಆರಿಸಲಾಯಿತು ಎಂಬ ಸಕಾರಣ ವಿವರವನ್ನ ಪಕ್ಷದ ವೆಬ್ ಸೈಟುಗಳಲ್ಲಿ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement