ನವದೆಹಲಿ: ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಗಳ ನ್ಯಾಯಾಧೀಶರನ್ನು ವರ್ಗಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದರಲ್ಲಿ ಹೇಳಿದೆ.
ರಾಜ್ಯಗಳು ಶಾಸಕರ ವಿರುದ್ಧದ ಪ್ರಕರಣಗಳನ್ನು ಆಯಾ ಹೈಕೋರ್ಟ್‌ಗಳ ಪೂರ್ವಾನುಮತಿಯಿಲ್ಲದೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್, ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿಚಾರಣೆಯನ್ನು ಒಂದು ವರ್ಷದೊಳಗೆ ಮುಗಿಸುವಂತೆ ಆದೇಶಿಸಿತು ಎಂದು ಬಾರ್‌ಅಂಡ್‌ಬೆಂಚ್ ವರದಿ ಮಾಡಿದೆ.
ಈ ನಿಟ್ಟಿನಲ್ಲಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ವಿಶೇಷ ನ್ಯಾಯಾಲಯಗಳಲ್ಲಿನ ಶಾಸಕರ ವಿರುದ್ಧದ ಪ್ರಕರಣಗಳು, ಬಾಕಿ ಇರುವ ಮತ್ತು ನಿರ್ಧರಿಸಿದ ಪ್ರಕರಣಗಳ ಮಾಹಿತಿಯನ್ನು ನೀಡುವಂತೆ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗೆ ಕೇಳಿತು.
ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಮತ್ತು ಇತರ ಚುನಾಯಿತ ಪ್ರತಿನಿಧಿಗಳ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್‌ನ ವಿಶೇಷ ಪೀಠವು ಮೇಲ್ವಿಚಾರಣೆ ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಗಮನಿಸಿದರು.
ತನ್ನ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ಶಾಸಕರ ವಿರುದ್ಧದ ಪ್ರಕರಣಗಳಲ್ಲಿ ತನಿಖೆಯ ಪ್ರಗತಿಗೆ ಸಂಬಂಧಿಸಿದಂತೆ ಸ್ಥಿತಿ ವರದಿಯನ್ನು ಪ್ರಸ್ತುತಪಡಿಸಲು ಸೂಚಿಸಿದೆ.
ವಿಚಾರಣೆಯ ಸಮಯದಲ್ಲಿ, ಸ್ಥಾನಿಕ ವರದಿಯನ್ನು ತಪ್ಪು ಫಾರ್ಮಾಟ್‌ನಲ್ಲಿ ಸಲ್ಲಿಸಿದ್ದಕ್ಕೆ ಜಾರಿ ನಿರ್ದೇಶನಾಲಯವನ್ನು ಪೀಠವು ತರಾಟೆಗೆ ತೆಗೆದುಕೊಂಡಿದೆ. ಕೇಂದ್ರ ಸಂಸ್ಥೆ ಕೇವಲ ಪಟ್ಟಿಯನ್ನು ಸಲ್ಲಿಸಿದೆ ಎಂದು ನ್ಯಾಯಾಲಯ ಗಮನಿಸಿದೆ.
ಪ್ರಸ್ತುತ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ನ್ಯಾಯಾಲಯಗಳೊಂದಿಗೆ ಸಹಕರಿಸಬೇಕು ಎಂದು ನ್ಯಾಯಾಲಯ ಒತ್ತಿಹೇಳಿತು.
ನಿಮ್ಮ ಕಾಮೆಂಟ್ ಬರೆಯಿರಿ