ಸಿಎಂ ಬೊಮ್ಮಾಯಿಗೆ ಮತ್ತೊಮ್ಮೆ ದೇವೇಗೌಡರಿಂದ ಅಭಯ: ಬಿಎಸ್‌ವೈ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಿ ಎಂದು ಸಲಹೆ

ನವದೆಹಲಿ: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಪ್ರಧಾನಿ ದೇವೇ ಗೌಡ ಅವರು ಅಭಯ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್​ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು, ಬಿಜೆಪಿಯ ವಿದ್ಯಮಾನಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಗೊಂದಲ ನಿವಾರಿಸಲು ಬೊಮ್ಮಾಯಿ ಸಮರ್ಥರಿದ್ದಾರೆ. ಅವರ ಕಟುಂಬಕ್ಕೂ ನಮಗೂ ಮೊದಲಿನಿಂದಲೂ ಪರಿಚಯ ಇದೆ. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದೇನೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಲು ಹೇಳಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಮನೆಗೆ ಬಂದಿದ್ದರು. ನನ್ನ ಹಾಗೂ ನನ್ನ ಪತ್ನಿಯ ಆಶೀರ್ವಾದ ಪಡೆಯಲು ಬಂದಿದ್ದಾಗಿ ಹೇಳಿದರು. ಅವರ ತಂದೆಯೂ ಮುಖ್ಯಮಂತ್ರಿಯಾಗಿದ್ದವರು. ಆಗಿನಿಂದಲೂ ನಮಗೂ ಅವರಿಗೂ ಒಡನಾಟ ಚೆನ್ನಾಗಿದೆ. ಅದರ ಹೊರತಾಗಿ ಭೇಟಿಗೆ ಬೇರೆ ಯಾವ ಬಣ್ಣ ಬೇಕಿಲ್ಲ. ಮೇಲಾಗಿ ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದೇನೆ. ನೆಲ-ಜಲ- ಭಾಷೆ ವಿಚಾರವಾಗಿ ಸಹಕಾರ ನೀಡುವುದಾಗಿ ಹೇಳಿದ್ದೆ. ರಾಜ್ಯದ ಜನರ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲದಕ್ಕೂ ಸಿದ್ಧವಿದೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸುತ್ತ ಹೈಕಮಾಂಡ್​ ನಾಯಕರನ್ನೂ ಅನುಸರಿಸಿಕೊಂಡು ಹೋಗಿ ಎಂದು ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ ಎಂದು ದೇವೇಗೌಡ ಹೇಳಿದ್ದಾರೆ.
ತಮ್ಮನ್ನು ಮುಖ್ಯಮಂತ್ರಿಗಳು ಭೇಟಿಯಾಗಿರುವ ಬಗ್ಗೆ ಶಾಸಕ ಪ್ರೀತಂ ಗೌಡ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಗೌಡರು, ನನ್ನನ್ನು ಅಷ್ಟೂ ಕೆಳಮಟ್ಟಕ್ಕೆ ಇಳಿಸಬೇಡಿ. ಮತ್ತೆ ಮತ್ತೆ ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಎಂದರು.
ಸಂಸತ್ ಅಧಿವೇಶನದ ಕಲಾಪಗಳು ಸುಗಮವಾಗಿ ನಡೆಯಲು ಚರ್ಚೆ ಮಾಡಲು ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷಗಳು ಅವಕಾಶ ಮಾಡಿಕೊಟ್ಟಿಲ್ಲ.ನನಗೆ ಒಂದು ದಿನವೂ ಮಾತನಾಡಲು ಅವಕಾಶ ಸಿಕ್ಕಿಲ್ಲ. ಈ ಬಾರಿಯ ರಾಜ್ಯ ಅಧಿವೇಶನದಲ್ಲಿ ಒಂದೂ ದಿನವೂ ಗೈರಾಗಿಲ್ಲ. ಎಲ್ಲ ದಿನದ ಕಲಾಪದಲ್ಲಿ ಭಾಗಿಯಾಗಿದ್ದೆ. ಮುಂದಿನ ದಿನಗಳಲ್ಲಿ ಸಮಯ ಸಿಕ್ಕರೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು 12 ಮಹಿಳೆಯರಿಗೆ ಹಾಗೂ 8 ಮಂದಿ ಪರಿಶಿಷ್ಟ ಜಾತಿ, 12 ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯವೋ ಅಥವಾ ಚುನಾವಣಾ ತಂತ್ರವೋ ಗೊತ್ತಿಲ್ಲ. ಏನೇ ಇದ್ದರೂ ಪ್ರಧಾನಿಯವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಾನು ಪ್ರಧಾನಿಯಾಗಿದ್ದಾಗಲೂ ಇಂತಹ ಅವಕಾಶ ನೀಡಲಾಗಿತ್ತು ಎಂದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement