ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅಧಿಕಾರ ಸ್ವೀಕಾರ

ಬೆಂಗಳೂರು: ಏಳು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ ರಕ್ಷಾ ರಾಮಯ್ಯ ಅವರು ಇಂದು (ಶುಕ್ರವಾರ) ಅಧಿಕಾರ ಸ್ವೀಕರಿಸಿದ್ದಾರೆ.
ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೃಷ್ಣ ಅಲಾವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಮೊಹಮ್ಮದ್, ಧ್ರುವನಾರಾಯಣ್, ಮಾಜಿ ಸಚಿವರಾದ ಎಂ.ಆರ್.ಸೀತಾರಾಮ್, ಆಂಜನೇಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಮೊದಲಾದವರ ಸಮ್ಮುಖದಲ್ಲಿ ರಕ್ಷಾ ರಾಮಯ್ಯ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್‍ನ ಕಾರ್ಯಕರ್ತರು 9 ಸಾವಿರ ಜನರಿಗೆ ಬೆಡ್ ಒದಗಿಸಿದ್ದಾರೆ. ಎರಡೂವರೆ ಲಕ್ಷ ಆಹಾರ ಕಿಟ್ ವಿತರಣೆ ಮಾಡಿದ್ದಾರೆ, 500 ಠಾಣೆಗಳಲ್ಲಿ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಕಾರ್ಯಕ್ರಮ ಮಾಡಿದ್ದಾರೆ. 8 ಸಾವಿರ ಮಂದಿಗೆ ಅಂಬುಲೆನ್ಸ್ ಸೇವೆ ನೀಡಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಮೋದಿ ಅಲೆ ಇದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅಲೆ ಇರುವುದಂತೂ ನಿಜ. ಆದರೆ ಅದು ಮೋದಿಯದಲ್ಲ. ದ್ವೇಷ ಮತ್ತು ದುರಾಡಳಿತದ ಅಲೆಯಿದೆ. ಪ್ರಧಾನಿಯವರು ತನಿಖಾ ಸಂಸ್ಥೆಗಳನ್ನು ಖಾಸಗಿ ಆಸ್ತಿ ಎಂಬಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪೆಗಾಸಸ್ ಬೇಹುಗಾರಿಕೆ ಸಾಫ್ಟ್‍ವೇರ್ ಬಳಸುವ ಬದಲು ರಾಜಕೀಯ ಕಾರಣಕ್ಕಾಗಿ ರಾಜಕಾರಣಿಗಳು ನ್ಯಾಯಾಧೀಶರ ಹಾಗೂ ಪತ್ರಕರ್ತರ ವಿರುದ್ಧ ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ವಿ.ಶ್ರೀನಿವಾಸ್ ಮಾತನಾಡಿ,ರಾಜ್ಯದಲ್ಲಿ ಬಿಜೆಪಿಗೆ ಜನ ಪೂರ್ಣ ಪ್ರಮಾಣದ ಬಹುಮತ ನೀಡಿಲ್ಲ. ಕುದುರೆ ವ್ಯಾಪಾರದಿಂದ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಎಲ್ಲದರಲ್ಲೂ ಕಮಿಷನ್ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸತ್ತ ಹೆಣ ಸುಡುವ ಸೌದೆಯಲ್ಲಿ ಹಣ ತಿಂದಿದ್ದಾರೆ. ಇವರಿಗೆ ದೂರದೃಷ್ಟಿಯಿಲ್ಲ. ದೂರದರ್ಶನದ ದೃಷ್ಟಿ ಮಾತ್ರ ಇದೆ ಎಂದು ಲೇವಡಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ವಿವಿಧ ಮುಂಚೂಣಿ ಘಟಕಗಳು ಕಾಂಗ್ರೆಸ್‍ನ ಸ್ತಂಭಗಳಿದ್ದಂತೆ. ಬಿಜೆಪಿ ದುರಾಡಳಿತವನ್ನು ಹತ್ತಿಕ್ಕಲು ಕಾಂಗ್ರೆಸ್ ಅಧಿಕಾರಕ್ಕೆ ತರಲು ಎಲ್ಲರ ಪ್ರಯತ್ನ ಅಗತ್ಯ. ಬಿಜೆಪಿಯವರು ಕಾಂಗ್ರೆಸಿಗರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅದಕ್ಕೆ ನಾವು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಮುಖ ಸುದ್ದಿ :-   ಕಾರವಾರ : ರಸ್ತೆ ಅಪಘಾತದಲ್ಲಿ ಖ್ಯಾತ ವೈದ್ಯ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement