
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳೊಂದಿಗೆ, ಯಾವ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ಇದೆಯೋ, ಆ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ಕೋವಿಡ್ ಪ್ರಕರಣಗಳ ಸಂಖ್ಯೆ ವರದಿಯಾದಂತ ಶಾಲೆಗಳನ್ನು ಕ್ಲೋಸ್ ಮಾಡಿ, ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಕುರಿತು ಇಂದು ಕೋವಿಡ್ ಉಸ್ತುವಾರಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕೋವಿಡ್ ನಿರ್ವಣೆಯ ತಜ್ಞರ ಸಮಿತಿ, ಕೋವಿಡ್ ಉಸ್ತುವಾರಿ ಸಚಿವರು ಮತ್ತು ಎಲ್ಲಾ ಅಧಿಕಾರಿಗಳ ಜೊತೆಗೆ ಸುಧೀರ್ಘವಾಗಿ ಚರ್ಚಿಸಿ, ತಜ್ಞರ ಸಮಿತಿಯು ಬಹಳ ವೈಜ್ಞಾನಿಕ ಅಂಕಿ ಅಂಶಗಳ ಸಮೇತವಾಗಿ ಮತ್ತು ಅಂತರಾಷ್ಟ್ರೀಯ, ರಾಷ್ಟ್ರೀಯ ಟ್ರೆಂಡ್ ಹಾಗೂ ನೆರೆಯ ಕೇರಳ, ಮಹಾರಾಷ್ಟ್ರ ಕೋವಿಡ್ ಸ್ಥಿತಿಗತಿಗಳ ಬಗ್ಗೆ ತಿಳಿಸಿದ್ದಾರೆ. ನಮ್ಮ ಮುಂದಿರುವ ಗುರಿ ಕೋವಿಡ್ ಅನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂಬುದು. ಕೋವಿಡ್ 2ನೇ ಅಲೆ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗ ಅಲೆ ಕಡಿಮೆಯಾಗಿದ್ದರೂ ಕೂಡ 1400ರಿಂದ 1800ರ ವರೆಗೆ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿಮುಂಜಾಗ್ರತೆವಹಿಸಲೇಬೇಕಿದೆ ಎಂದರು.
ಸಭೆಯಲ್ಲಿ ಶಾಲೆಗಳ ಆರಂಭದ ಬಗ್ಗೆಯೂ ಚರ್ಚಿಸಲಾಗಿದೆ. ಯಾವ ಜಿಲ್ಲೆಗಳಲ್ಲಿ ಶಾಲೆ ಆರಂಭಮಾಡಬೇಕು ಎಂಬುದರ ಕುರಿತೂ ಚರ್ಚೆ ನಡೆಸಲಾಗಿದೆ. ಯಾವ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಿದೆ. ಅಲ್ಲಿ ಶಾಲೆ ಆರಂಭ ಬೇಡ. ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಇದೆ ಅಲ್ಲಿ ಶಾಲೆಗಳನ್ನು ಆರಂಭದ ಬಗ್ಗೆ ಚರ್ಚಿಸಲಾಗಿದೆ ಎಂದರು.
ಶಾಲೆಗಳ ಆರಂಭಕ್ಕೂ ಮುನ್ನಾ ಪೋಷಕರು, ಶಿಕ್ಷಕರಿಗೆ ಕೊರೋನಾ ವ್ಯಾಕ್ಸಿನ್ ನೀಡಬೇಕು ಹಾಗೂ ಶಾಲೆ ಆರಂಭವಾದ ನಂತರ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಆ ಶಾಲೆಗಳನ್ನು ಬಂದ್ ಮಾಡಿ ನಂತರ ಆರಂಭ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಯಿತು ಜಿಲ್ಲಾವಾರು ಕೋವಿಡ್ ನಿರ್ವಹಣೆ ಕುರಿತಂತೆಯೂ ಚರ್ಚಿಸಲಾಗಿದ್ದು, ಆಯಾ ಜಿಲ್ಲೆಯಲ್ಲೇ ನಿರ್ವಹಣಾ ತಜ್ಞರ ಸಮಿತಿಯನ್ನು ರಚಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.
ದಕ್ಷಿಣ ಕನ್ನಡ, ಮೈಸೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಾಮರಾಜನಗರ ಈ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನ್ ಹೆಚ್ಚಿಸಲಾಗುತ್ತದೆ. ಗಡಿ ಜಿಲ್ಲೆಗಳಲ್ಲಿನ ಹಳ್ಳಿಗಳಲ್ಲಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿಯೂ ಸಂಪೂರ್ಣ ಕೊರೋನಾ ಪರೀಕ್ಷೆ ಮಾಡುವಂತ ಕ್ರಮದ ಸೂಚನೆ ನೀಡಿದ್ದಾರೆ ಎಂದರು.
ರಾಯಚೂರು, ಬಳ್ಳಾರಿ, ಕಲಬುರ್ಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೋನಾ ಪರೀಕ್ಷೆಗಳನ್ನು ಹೆಚ್ಚು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಜಿನೋಮಿಕ್ ಲ್ಯಾಬ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. 6 ಲ್ಯಾಬ್ ಗಳನ್ನು ಬೆಂಗಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಮುಂದಿನ 3 ವಾರಗಳಲ್ಲೇ ಸ್ಥಾಪಿಸಲಾಗುತ್ತದೆ ಎಂದರು.
ಈಗ ಸುಮಾರು 4 ಕೋಟಿಯಷ್ಟು ಲಸಿಕೆ ನೀಡಲಾಗಿದೆ. ಸುಮಾರು 30 ಲಕ್ಷ ಈ ತಿಂಗಳ ಕೊನೆಗೆ ಬರಲಿದೆ. ಆ ಬಗ್ಗೆ ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿಯಾಗಿ ಕೇಳಿಕೊಳ್ಳಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮಕ್ಕಳಿಗೆ ಮಾರಕವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಬ್ಲಡ್ ಬ್ಯಾಂಕ್ ಸೇರಿದಂತೆ ಮಕ್ಕಳ ಐಸಿಯು ಬೆಡ್ ಗಳ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗಿದೆ. ಶೇ.2ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಬಂದ್ರೇ.. ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ