ಮಹಾನಗರ ಪಾಲಿಕೆ ಚುನಾವಣೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಮೂಲಸೌಕರ್ಯ ಅಭಿವೃದ್ಧಿಯೇ ಬಿಜೆಪಿ ಅಜೆಂಡಾ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸೆಪ್ಟೆಂಬರ್‌ 3ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಹೀಗಾಗಿ ಈಗ ಅವಳಿ ನಗರದಲ್ಲಿ ರಾಜಕೀಯ ಚಟುವಟಿಕೆ ಗದಿಗೆದರಿದೆ. ಬಿಜೆಪಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿಗಳನ್ನಾಗಿ ನೂತನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ನೇಮಿಸಲಾಗಿದೆ.ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಹೇಶ ಟೆಂಗಿನಕಾಯಿ ಅವರು ಕನ್ನಡಿ.ನ್ಯೂಸ್‌ಗೆ ಜೊತೆ ಚುನಾವಣೆಯಲ್ಲಿ ಬಿಜೆಪಿಯ ಪ್ರಗತಿ, ಎದುರಾಳಿ ಪಕ್ಷಗಳು, ಯಾಕೆ ಜನರು ತಮಗೆ ಮತಚಲಾಯಿಸಲಿದ್ದಾರೆ ಇತ್ಯಾದಿ ಸಂಗತಿಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಹುಬ್ಬಳ್ಳಿ ಅವರು ಅವಳಿ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೇ ಬಿಜೆಪಿ ಚುನಾವಣೆಯ ಮುಖ್ಯ ಅಜೆಂಡಾ. ಬಿಜೆಪಿ ಆಡಳಿತದಲ್ಲಿ ಪಾಲಿಕೆಯಲ್ಲಿ ಆದ ಸುದಾರಣೆಗಳು,  ರಾಜ್ಯ ಹಾಗೂ ಕೇಂದ್ರ ಎರಡರಲ್ಲಿಯೂ ಬಿಜೆಪಿ ಅಧಿಕಾರದಲ್ಲಿರುವುದು ಹಾಗೂ ಹುಬ್ಬಳ್ಳಿಯವರೇ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿರುವುದು, ಹುಬ್ಬಳ್ಳಿಯವರೇ ಕೇಂದ್ರ ಸಚಿವರಿರುವುದು ನಮಗೆ ಪ್ಲಸ್‌ ಪಾಯಿಂಟ್‌ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟಂಗಿನಕಾಯಿ ಪ್ರತಿಪಾದಿಸಿದ್ದಾರೆ.

* ಸತತವಾಗಿ ಎರಡು ಅವಧಿಗೆ ಬಿಜೆಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದುದರಿಂದ ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳೂ ದೊಡ್ಡ ಪ್ರಮಾಣದಲ್ಲಿದ್ದಾರೆ.. ಅದನ್ನು ಹೇಗೆ ನಿಭಾಯಿಸುತ್ತೀರಿ..?
ಬಿಜೆಪಿ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗೆ ಬಿಜೆಪಿಯೇ ಅಧಿಕಾರದಲ್ಲಿದೆ. ಹೀಗಾಗಿ ಆಕಾಂಕ್ಷಿಗಳು ಒಂದೊಂದು ವಾರ್ಡುಗಳಿಗೆ ಎಂಟ್ಹತ್ತು ಜನರಿದ್ದಾರೆ. ಆದರೆ ಬಿಜೆಪಿಯಲ್ಲಿ ಇದನ್ನು ನಿರ್ಧರಿಸಲು ಮೊದಲಿನಿಂದಲೂ ಒಂದು ವ್ಯವಸ್ಥೆಯಿದೆ. ಅಭ್ಯರ್ಥಿಗಳ ಆಯ್ಕೆ ಆ ವ್ಯವಸ್ಥೆ ಅಡಿಯಲ್ಲಿಯೇ ನಡೆಯುತ್ತದೆ. ನಮ್ಮಲ್ಲಿ ಮಂಡಲ ಸಮಿತಿ ಅಥವಾ ವಾರ್ಡ್‌ ಸಮಿತಿ ಇದೆ. ಬಹುತೇಕ ಅಭ್ಯರ್ಥಿಗಳ ಸ್ಕ್ರುಟಿನಿ ಅಲ್ಲಿಯೇ ನಡೆಯುತ್ತದೆ. ಅಲ್ಲಿಂದ ಜಿಲ್ಲಾ ಸಮಿತಿಗೆಬರುತ್ತದೆ.

ಜಿಲ್ಲಾ ಸಮಿತಿಯಲ್ಲಿ ಒಂದು ಕೋರ್‌ ಕಮಿಟಿ ಇದೆ. ಇದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಪಾಲಿಕೆ ವ್ಯಾಪ್ತಿಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಇರುತ್ತಾರೆ. ಇದರಲ್ಲಿ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದು ಅಂತಿಮವಾಗುತ್ತದೆ. ಇನ್ನೂ ಕೆಲವೆಡೆ ಗೊಂದಲಗಳಿದ್ದರೆ ಅದನ್ನು ರಾಜ್ಯ ಸಮಿತಿ ಜೊತೆ ಚರ್ಚಿಸುತ್ತಾರೆ. ಮೊದಲಿನಿಂದಲೂ ಈ ವ್ಯವಸ್ಥೆ ಇರುವುದರಿಂದ ಟಿಕೆಟ್‌ ಆಯ್ಕೆಯಲ್ಲಿ ಅಂತಹ ಸಮಸ್ಯೆ ಎದುರಾಗುವುದಿಲ್ಲ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

*ಈ ಸಲದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹೊಸಮುಖಗಳಿಗೆ ಪ್ರಾಧಾನ್ಯತೆ ನೀಡಲಿದೆಯೇ..? ಆಯ್ಕೆಗೆ ಮಾನದಂಡಗಳೇನು..?
ಖಂಡಿತವಾಗಿಯೂ ಬಿಜೆಪಿ ಹೊಸಮುಖಗಳಿಗೆ ಅವಕಾಶ ನೀಡಲಿದೆ. ಪಕ್ಷ ಮುಂದೆ ಹೋಗಬೇಕು ಎಂದರೆ ಇದು ಅನಿವಾರ್ಯ. ಆದರೆ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ಸಮಾಲೋಚಿಸಿ ಮಹಾನಗರ ಜಿಲ್ಲಾ ಕೋರ್‌ ಕಮಿಟಿ ಈ ಬಗ್ಗೆ ನಿರ್ಧಾರ ಮಾಡುತ್ತದೆ.
ಅಭ್ಯರ್ಥಿಗಳಿಗೆ ಆಯ್ಕೆ ಮಾಡಲು ಇರುವ ಮುಖ್ಯ ಮಾನದಂಡ ಅವರಿಗೆ ಜನಸಂಪರ್ಕ ಇರಬೇಕು. ಅವಳಿ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಚಿಂತನೆ ಇರಬೇಕು. ಜೊತೆಗೆ ಸಾರ್ವಜನಿಕರಿಗೆ ಅಗತ್ಯ ಕೆಲಸಗಳನ್ನು ಮಾಡಿಕೊಡುವ ಮನಸ್ಸಿರಬೇಕು. ಕೆಲವರಿಗೆ ಆಹಾರ ಪಡಿತರ ಕಾರ್ಡುಗಳು, ಆಧಾರ ಕಾರ್ಡುಗಳು ಇತ್ಯಾದಿಗಳ ಬಗ್ಗೆಯೂ ಸಮಸ್ಯೆ ಇರುತ್ತದೆ. ಅವರ ಸಮಸ್ಯೆಗೆ ಸ್ಪಂದಿಸುವ ಮನೋಭಾವ ಬೇಕು. ಇದು ಉದಾಹರಣೆಯಷ್ಟೆ. ಇಂಥ ಸಾರ್ವಜನಿಕ ಸ್ಪಂದನೆ ಮನೋಭಾವ ಉಳ್ಳವರಿಗೆ ನಾವು ಒತ್ತು ನೀಡುತ್ತೇವೆ.

*ಆಮ್‌ ಆದ್ಮಿ ಪಾರ್ಟಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವುದರಿಂದ ಆಗುವ ಪರಿಣಾಮ..?

ಮೊದಲನೆಯದಾಗಿ ಆಮ್‌ ಆದ್ಮಿ ಪಾರ್ಟಿ ಅಸ್ತಿತ್ವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಷ್ಟೊಂದಿಲ್ಲ. ನನ್ನ ದೃಷ್ಟಿಯಲ್ಲಿ ನಮಗೆ ಬಹುತೇಕ ಕಡೆ ಕಾಂಗ್ರೆಸ್‌ ಜೊತೆಯೇ ಸ್ಪರ್ಧೆ ಇರುವುದು, ಕೆಲವು ಪಾಕೆಟ್‌ಗಳಲ್ಲಿ ಜೆಡಿಎಸ್‌ ಸ್ಪರ್ಧೆ ನೀಡಬಹುದು. ಆದರೆ ರಾಜಣ್ಣ ಕೊರವಿ ಅವರೂ ಬಿಜೆಪಿ ಸೇರಿರುವುದರಿಂದ ಜೆಡಿಎಸ್‌ ಭದ್ರ ನೆಲೆಯಲ್ಲಿ ಬಿಜೆಪಿ ಬಲ ಹೆಚ್ಚಿದೆ. ಹೀಗಾಗಿ ಆಮ್‌ ಆದ್ಮಿ ಪಾರ್ಟಿ ಉಪಸ್ಥಿತಿಯಿಂದ ಬಿಜೆಪಿಗೆ ಅಂತ ವ್ಯತ್ಯಾಸವೇನೂ ಆಗುವುದಿಲ್ಲ. ಅದರಿಂದ ಬೇರೆ ಪಕ್ಷಗಳಿಗೆ ಆಗಬಹುದು. ಯಾಕೆಂದರೆ ಹುಬ್ಬಳ್ಳಿ-ಧಾರವಾಡದ ಮಟ್ಟಿಗೆ ಹೇಳುವುದಾದರೆ ಕಾಂಗ್ರೆಸ್‌ ಒಡೆದ ಮನೆಯಾಗಿದೆ. ಇದು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್‌ನ ವಿಭಾಗೀಯಮಟ್ಟದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮುಂದೆಯೇ ಅಸಮಾಧಾನ ಸ್ಫೋಟಗೊಂಡಿದೆ. ಹೀಗಾಗಿ ಕಾಂಗ್ರೆಸ್‌ ಒಡಕಿನ ಲಾಭ ನಮಗೂ ಆಗುತ್ತದೆ, ಬೇರೆಯವರೂ ತೆಗೆದುಕೊಳ್ಳಬಹುದು.

*ಮತದಾರರಿಗೆ ನೀವು ಹೇಗೆ ಮನವರಿಕೆ ಮಾಡುತ್ತೀರಿ..? ನಿಮ್ಮ ಭರವಸೆ ಅವರಿಗೆ ಮನವರಿಕೆ ಆಗುತ್ತದೆ ಎಂದು ಅನಿಸುತ್ತದೆಯೇ..?
ನಾನು ಮೊದಲೇ ಹೇಳಿದಂತೆ ಅವಳಿ ನಗರದ ಅಭಿವೃದ್ಧಿಯೇ ನಮ್ಮ ಪಕ್ಷದ ಪ್ರಮುಖ ಅಜೆಂಡಾ. ಅದರಲ್ಲಿಯೂ ಹುಬ್ಬಳ್ಳಿ-ಧಾರವಾಡ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಹಾಗೂ ಮುಂದೆಯೂ ಒತ್ತು ನೀಡುವ ವಾಗ್ದಾನ ಮಾಡುತ್ತೇವೆ. ಉದಾಹರಣೆಗೆ ನಮ್ಮ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರುನ ಸಮಸ್ಯೆ ಬಗೆಹರಿದೆ. ಮೊದಲು ೮-10 ದಿನಗಳಿಗೊಮ್ಮೆ ನೀರು ಬರುತ್ತಿತ್ತು. ಈಗ ಎರಡ್ಮೂರು ದಿನಗಳಿಗೆ ನೀರು ಪೂರೈಕೆಯಾಗುವಂತೆ ಮಾಡಿದ್ದೇವೆ. ಜೊತೆಗೆ ನಿರಂತರ ನೀರು ಪೂರೈಕೆ ಯೋಜನೆ 24*7 ವಿಸ್ತರಿಸಿದ್ದೇವೆ. ರಾಜ್ಯದಲ್ಲಿ ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಅದು ಮತ್ತೆ ನನೆಗುದಿಗೆ ಬಿದ್ದಿತ್ತು. ಈಗ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಮತ್ತೆ ಚಾಲನೆ ನೀಡಿದ್ದೇವೆ. ಅನೇಕ ರಸ್ತೆಗಳನ್ನು ಸಿಮೆಂಟ್‌ ರಸ್ತೆಗಳನ್ನಾಗಿ ಪರಿವರ್ತಿಸಿದ್ದೇವೆ. ಮಹಾನಗರದಲ್ಲಿ ಅಡುಗೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಅನೇಕ ರಸ್ತೆಗಳು ಸಿಸಿ ರಸ್ತೆಗಳಾಗಿವೆ. ಇವೆಲ್ಲ ಕೆಲವು ಉದಾಹರಣೆಗಳಷ್ಟೆ. ಹೀಗೆ ನಾವು ಹೇಳಿದ್ದನ್ನು ಮಾಡಿದ್ದೇವೆ.
ನಾವು ನೀಡುವ ಭರವಸೆ ಈಡೇರಿಸುತ್ತೇವೆಎಂಬುದು ಜನರಿಗೆ ನಮ್ಮ ಹಿಂದಿನ ಆಡಳಿತದಿಂದ ಮನವರಿಕೆಯಾಗಿದೆ. ಜೊತೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿರುವುದರಿಂದ ಇಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಅನುದಾನ ತರುವುದು ಸುಲಭವಾಗುತ್ತದೆ ಎಂಬುದು ಜನರಿಗೆ ಗೊತ್ತಿದೆ. ಇಲ್ಲಿಯವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವುದು, ಹುಬ್ಬಳ್ಳಿಯವರೇ ಆದ ಪ್ರಲ್ಹಾದ ಜೋಶಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದು, ಅಲ್ಲಿಂದಲೂ ಅವರು ಅವಳಿ ನಗರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಇಲ್ಲಿಯವರೇ ಆಗಿರುವುದು, ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿಯೇ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಸೇರಿ ಮೂವರು ಶಾಸಕರಿರುವುದು, ಇವೆಲ್ಲ ಸಂಗತಿಗಳೂ ಜನರಿಗೆ ಗೊತ್ತಿದೆ. ಹೀಗಾಗಿಯೇ ಅವರು ನಮಗೆ ಮತ್ತೊಮ್ಮೆ ಅಧಿಕಾರ ನೀಡುತ್ತಾರೆಂಬ ವಿಶ್ವಾಸವಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

*ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಅಬ್ಬಯ್ಯ ಅವರಿದ್ದಾರೆ. ಅಲ್ಲಿ ನಿಮಗೆ ಸ್ಥಾನಗಳ ಹಿನ್ನಡೆ ಆಗಲಿಕ್ಕಿಲ್ಲವೇ..?
ಖಂಡಿತವಾಗಿಯೂ ಇಲ್ಲ. ಅಲ್ಲಿಯೂ ಈಗ ನಮ್ಮ ಪಕ್ಷದ ಸಂಘಟನೆ ಬೆಳೆದಿದೆ. ಅಲ್ಪಸಂಖ್ಯಾತರೂ ದೊಡ್ಡ ಪ್ರಮಾಣದಲ್ಲಿ ಪಕ್ಷವನ್ನು ಸೇರುತ್ತಿದ್ದಾರೆ. ಹೀಗಾಗಿ ನೋಡ್ತಾ ಇರಿ. ಕಳೆದ ಸಲಕ್ಕಿಂತಲೂ ನಾವು ಅಲ್ಲಿ ಉತ್ತಮ ಸಾಧನೆ ಮಾಡ್ತೇವೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement