ಭಾರತೀಯ ವಿಜ್ಞಾನ ಪ್ರಚಾರಕ್ಕೆ ವಿವಿವಿ- ಎಂಐಟಿ ಸಹಯೋಗ: ರಾಘವೇಶ್ವರ ಶ್ರೀ

ಗೋಕರ್ಣ: ವಿಶ್ವದ ಜ್ಞಾನವೇ ವಿಜ್ಞಾನ; ಆತ್ಮದ ಜ್ಞಾನವೇ ಆತ್ಮಜ್ಞಾನ. ಇವೆರಡ ಸಮ್ಮಿಲನವೇ ಭಾರತೀಯ ಶಾಸ್ತ್ರ ಅಥವಾ ಭಾರತೀಯ ವಿಜ್ಞಾನ. ಇದು ಸಾರ್ವಕಾಲಿಕ ಪ್ರಸ್ತುತತೆ ಹೊಂದಿದ್ದು, ಇದನ್ನು ಜನಮಾನಸಕ್ಕೆ ಒಯ್ಯುವ ನಿಟ್ಟಿನಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಮಹಾರಾಷ್ಟ್ರ ಇನ್‍ಸ್ಟಿಟ್ಯೂಟ್ ಜತೆ ಸಹಯೋಗ ಹೊಂದಲಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಝೂಮ್ ಮೀಟಿಂಗ್ ವೇದಿಕೆಯಲ್ಲಿ ಭಾನುವಾರ ಜ್ಞಾನವಿಜ್ಞಾನ ಚಿಂತನ ಸತ್ರ ಮಾಲಿಕೆಯಲ್ಲಿ ಆಯೋಜಿಸಿದ್ದ “ವಿಜ್ಞಾನ ಮತ್ತು ಶಾಸ್ತ್ರ” ಎಂಬ ಆನ್‍ಲೈನ್ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಖ್ಯಾತ ಕಂಪ್ಯೂಟರ್ ವಿಜ್ಞಾನತಜ್ಞ ಡಾ.ಸಾಯಿ ರಾಮಕೃಷ್ಣ ಸುಸರ್ಲಾ ನೇತೃತ್ವದಲ್ಲಿ ನಡೆಯುತ್ತಿರುವ ಪುಣೆಯ ಎಂಐಟಿ ಸ್ಕೂಲ್ ಆಫ್ ವೇದಿಕೆ ಸೈನ್ಸ್ ಮತ್ತು ವಿವಿವಿ ಆಧುನಿಕ ಶಿಕ್ಷಣ ಮತ್ತು ಭಾರತೀಯ ಶಾಸ್ತ್ರಗಳನ್ನು ಜತೆಜತೆಯಾಗಿ ಒಯ್ಯುವ ಸಮಾನ ಆಸಕ್ತಿ ಹೊಂದಿದ್ದು, ಭವಿಷ್ಯದಲ್ಲಿ ಉಭಯ ಸಂಸ್ಥೆಗಳ ಸಹಯೋಗ ಇಂಥ ವಿನೂತನ ಶಿಕ್ಷಣ ವಿಧಾನಕ್ಕೆ ಹೊಸ ಆಯಾಮ ಒದಗಿಸಲಿದೆ ಎಂದು ಬಣ್ಣಿಸಿದರು.
“ವಿಜ್ಞಾನ ಮತ್ತು ಶಾಸ್ತ್ರ” ವಿಷಯದ ಬಗ್ಗೆ ಉಪನ್ಯಾಸ ನೀಡಿದ ಪುಣೆ ಎಂಐಟಿ ಸ್ಕೂಲ್ ಆಫ್ ವೇದಿಕ್ ಸೈನ್ಸಸ್‍ನ ಡೀನ್ ಡಾ.ಸಾಯಿ ರಾಮಕೃಷ್ಣ ಸುಸರ್ಲಾ, “ಗತವೈಭವವನ್ನು ಸಂಭ್ರಮಿಸುವುದಕ್ಕಿಂತ ಹೆಚ್ಚಾಗಿ ಭವಿಷ್ಯವನ್ನು ರೂಪಿಸುವಲ್ಲಿ ಶಾಸ್ತ್ರದ ವಿಷಯಗಳು ಸಹಕಾರಿ. ವೇದವಿಜ್ಞಾನ ಸುಸ್ಥಿರ ಅನುಶೋಧನೆಗೆ ಹೊಸ ಆಯಾಮ ನೀಡಬಲ್ಲದು. ಭಾರತೀಯ ವಿಜ್ಞಾನ ಸಮಕಾಲೀನ ಕಾಲಘಟ್ಟಕ್ಕೆ ಎಷ್ಟರ ಮಟ್ಟಿಗೆ ಪ್ರಸ್ತುತ ಎಂಬ ಬಗ್ಗೆ ಸಂಶೋಧನೆಗಳನ್ನು ನಡೆಸುವ ಸಲುವಾಗಿಯೇ ಮಹಾರಾಷ್ಟ್ರ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರತ್ಯೇಕ ವಿಭಾಗ ಆರಂಭಿಸಿದೆ” ಎಂದರು.
1800ನೇ ಇಸ್ವಿಯವರೆಗೂ ಭಾರತ ಅತ್ಯಧಿಕ ಜಿಡಿಪಿ ಹೊಂದಿದ ಸುಸ್ಥಿರ ದೇಶವಾಗಿತ್ತು. ಭಾರತ ಆಧ್ಯಾತ್ಮಿಕ ಸ್ವರ್ಗ; ವಿಜ್ಞಾನದ ಹಿನ್ನೆಲೆ ಇಲ್ಲದೇ ಇದು ಸಾಧ್ಯವಾಗಿರದು. ಭಾರತದ ಜ್ಞಾನಪರಂಪರೆ ಸಮೃದ್ಧವಾಗಿದ್ದು, ಮೂರು ಕೋಟಿಗೂ ಅಧಿಕ ಹಸ್ತಪ್ರತಿಗಳನ್ನು ಇನ್ನೂ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಈ ಪೈಕಿ ಬಹುತೇಕ ಸಂಸ್ಕೃತದಲ್ಲಿದೆ ಎಂದರು.
ಉದಾಹರಣೆಗೆ ಜ್ಯೋತಿಷ್ಯವನ್ನು ಹವಾಮಾನ ಮುನ್ಸೂಚನೆಗೆ ಬಳಸಿಕೊಳ್ಳಲಾಗುತ್ತಿತ್ತು. ಆಯುರ್ವೇದದಿಂದ 40 ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪ್ರಕರಣಗಳನ್ನು ಗುಣಪಡಿಸಿದ ಲಿಖಿತ ದಾಖಲೆಗಳಿವೆ. ಇಡೀ ವಿಶ್ವದಲ್ಲಿ ಭಾರತದಲ್ಲಿ ಮಾತ್ರ ಸಾಹಿತ್ಯಶಾಸ್ತ್ರ ಇದೆ. ಸೃಜನಶೀಲತೆಗೆ ವೈಜ್ಞಾನಿಕ ಹಿನ್ನೆಲೆಯಿದೆ. ವೇದ ಗಣಿತ ಎಲ್ಲ ಆಧುನಿಕ ಎಂಜಿನಿಯರಿಂಗ್ ತಂತ್ರಗಳ ಮೂಲ” ಎಂದು ವಿಶ್ಲೇಷಿಸಿದರು.
ಭಾರತೀಯ ವಿಜ್ಞಾನ ಇಂದು ವೆಂಟಿಲೇಟರ್ ಮೋಡ್‍ನಲ್ಲಿದೆ. ಯುವ ಸಮೂಹವನ್ನು ಆಕರ್ಷಿಸಲು ಸಾಧ್ಯವಾಗದಿರುವುದೇ ಈ ಸ್ಥಿತಿಗೆ ಕಾರಣ. ಎಲ್ಲ ಕ್ಷೇತ್ರಗಳಿಗೂ ಸಮಾನ ಒತ್ತು ನೀಡಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಆದರೆ ಇಂದು ಪಾಶ್ಚಿಮಾತ್ಯ ವಿಧಾನಕ್ಕೆ ಮಾತ್ರ ಒತ್ತು ನೀಡಿರುವುದು ಸುಸ್ಥಿರತೆಯ ನಾಶಕ್ಕೆ ಕಾರಣವಾಗಿದೆ. ಪಾಶ್ಚಿಮಾತ್ಯ ವಿಧಾನದಲ್ಲಿ ಸಮೃದ್ಧಿ, ಶಾಂತಿ ಮತ್ತು ಶಕ್ತಿಯನ್ನು ಗಳಿಸಲು ಯತ್ನಿಸುತ್ತಿರುವುದು ವಿನಾಶಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
“ಜ್ಞಾತ, ಜ್ಞೇಯ, ಶಾಸ್ತ್ರಗಳು ಎಲ್ಲ ಶ್ರೇಯಸ್ಸಿಗೆ ಮೂಲ. ಭಾರತೀಯ ಶಾಸ್ತ್ರ ಇವೆಲ್ಲಕ್ಕೂ ಸಮಾನ ಒತ್ತು ನೀಡಿತ್ತು. ಆಧುನಿಕ ವಿಜ್ಞಾನಕ್ಕಿಂತ ಶಾಸ್ತ್ರವಿಜ್ಞಾನ ಹೆಚ್ಚಿನ ವಿಸ್ತೃತತೆಯನ್ನು ಹೊಂದಿದೆ. ಮನುಕುಲದ ಶಕ್ತಿ ಹೆಚ್ಚಿಸುವುದು ವಿಜ್ಞಾನದ ಉದ್ದೇಶ. ಶಕ್ತಿಯ ಉದ್ದೇಶ ಶ್ರೇಯಸ್ಸು. ಇಡೀ ಮನುಕುಲದ ಕಲ್ಯಾಣವೇ ಭಾರತೀಯ ಶಾಸ್ತ್ರಗಳ ತಿರುಳು” ಎಂದರು.
ತಾರ್ಕಿಕತೆ, ಪುರಾವೆ ಹಾಗೂ ಮಾಡೆಲ್ ಅಭಿವೃದ್ಧಿಯ ತತ್ವಗಳು ವಿಜ್ಞಾನದ ತಳಹದಿಯಾಗಿದ್ದು, ಭಾರತೀಯ ಧರ್ಮಶಾಸ್ತ್ರ, ನ್ಯಾಯಶಾಸ್ತ್ರ, ಲಕ್ಷಣಶಾಸ್ತ್ರದಲ್ಲಿ ಇವು ಅಡಕವಾಗಿವೆ. ಭಾರತೀಯ ಶಾಸ್ತ್ರದ ಅತೀಂದ್ರಿಯ ದರ್ಶನಕ್ಕೆ ನಮ್ಮ ನರಮಂಡಲವನ್ನು ಸೂಕ್ತವಾಗಿ ತರಬೇತುಗೊಳಿಸದ ಕಾರಣದಿಂದ ಇಂದು ಶಾಸ್ತ್ರದ ಶ್ರೇಷ್ಠ ಅಂಶಗಳು ಇಂದು ನಮಗೆ ಕೈಗೆಟುಕುತ್ತಿಲ್ಲ ಎಂದು ಪ್ರತಿಪಾದಿಸಿದರು.
ನೈತಿಕತೆಯ ವ್ಯಾಖ್ಯಾನಕ್ಕೆ ಧರ್ಮಶಾಸ್ತ್ರ ಮೂಲವಾಗಬಲ್ಲದು; ದೇಹಪ್ರಕೃತಿಗೆ ಅನುಗುಣವಾದ ಚಿಕಿತ್ಸೆ ಭಾರತೀಯ ಶಾಸ್ತ್ರಗಳಲ್ಲಷ್ಟೇ ಇದೆ. ಅಂತೆಯೇ ಕಲಾ ಚಿಕಿತ್ಸೆ ವಿಧಾನಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ. ಚರಕ ಸಂಹಿತೆ, ಅರ್ಥಶಾಸ್ತ್ರದಂಥ ಕೃತಿಗಳಲ್ಲಿ ಈ ಬಗ್ಗೆ ವ್ಯಾಪಕ ಉಲ್ಲೇಖಗಳಿವೆ ಎಂದರು. ಭಾರತೀಯ ಶಾಸ್ತ್ರಗಳ ಪರಿಣತರು ಭಾರತೀಯ ತತ್ವಗಳ ಹಿರಿಮೆಯನ್ನು ಪಾಶ್ಚಾತ್ಯ ಜಗತ್ತಿಗೆ ತಿಳಿಸಿಕೊಟ್ಟಾಗ ಮಾತ್ರ ಇದರ ಪ್ರಸ್ತುತತೆ ಹೆಚ್ಚಲು ಸಾಧ್ಯ. ಆಧುನಿಕ ವಿಜ್ಞಾನಿಗಳು ಶಾಸ್ತ್ರಪಂಡಿತರ ಜತೆಗೆ ಸಮಾಲೋಚಿಸಿದಾಗ ಇದು ಸಾಧ್ಯ. ಬಾಲ್ಯದಿಂದಲೇ ಶಿಕ್ಷಣದಲ್ಲಿ ಇದನ್ನು ಅಳವಡಿಸಿದಾಗ ಮತ್ತೆ ಭಾರತೀಯ ಶಾಸ್ತ್ರದ ಸಾರ್ವತ್ರಿಕತೆಯ ಪರಿಚಯವಾಗಬಲ್ಲದು. ಈ ನಿಟ್ಟಿನಲ್ಲಿ ವಿಷ್ಣುಗುಪ್ತ ವಿವಿಯಂಥ ಸಂಸ್ಥೆಗಳು ಮಹತ್ವದ ಕೊಡುಗೆ ನೀಡಬಲ್ಲವು ಎಂದು ಬಣ್ಣಿಸಿದರು.
ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಕಾರ್ಯದರ್ಶಿ ನೀಲಕಂಠ ಯಾಜಿ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮ ಮತ್ತಿತರರು ಉಪಸ್ಥಿತರಿದ್ದರು. ವಿವಿವಿ ಗುರುಕುಲಗಳ ಉಪಪ್ರಾಚಾರ್ಯರಾದ ಸೌಭಾಗ್ಯ ನಿರೂಪಿಸಿದರು. ವಿದ್ಯಾ ಪರಿಷತ್‍ನ ಸುಭದ್ರಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement