ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.48ರಷ್ಟು ಮಳೆ ಕೊರತೆ..!

ಬೆಂಗಳೂರು: ರಾಜ್ಯ ದಲ್ಲಿ ಕಳೆದ ಎರಡು ವಾರಗಳಿಂದ ನೈರುತ್ಯ ಮುಂಗಾರು ದುರ್ಬಲಗೊಂಡಿದ್ದು, ವಾಡಿಕೆಗಿಂತ ಶೇ.48ರಷ್ಟು ಮಳೆ ಕೊರತೆ ಉಂಟಾಗಿದೆ.
ಆ.1ರಿಂದ 15ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಹಲವೆಡೆ ಮಳೆ ಕೊರತೆ ಮುಂದುವರೆದಿದೆ. ಚದುರಿದಂತೆ ಅಲ್ಲಲ್ಲಿ ಸಾಧಾರಣ ಪ್ರಮಾಣದ ಮಳೆ ಮುಂದುವರೆದಿದ್ದರೂ ಹಲವೆಡೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ.
ಜುಲೈನಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತ ತಲುಪಿವೆ. ಈಗಾಗಲೇ ಕೆಲವೆಡೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಾಕಷ್ಟು ಬೆಳೆ ಹಾನಿ ಉಂಟಾದರೆ ಮತ್ತೆ ಹಲವೆಡೆ ಮಳೆ ಅಭಾವದಿಂದ ಬೆಳೆಗಳು ಒಣಗುತ್ತಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದೆರಡು ವಾರಗಳ ದಕ್ಷಿಣ ಒಳನಾಡಿನಲ್ಲಿ ಶೇ.20ರಷ್ಟು , ಉತ್ತರ ಒಳನಾಡಿನಲ್ಲಿ ಶೇ.63ರಷ್ಟು , ಮಲೆನಾಡಿನಲ್ಲಿ ಶೇ.45ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.46ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಜೂನ್ 1ರಿಂದ ಆ.15ರವರೆಗಿನ ಅವಧಿಯಲ್ಲೂ ರಾಜ್ಯದಲ್ಲಿ ಶೇ.7ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅದರಲ್ಲೂ ಅತಿಹೆಚ್ಚು ಮಳೆಯಾಗುವ ಮಲೆನಾಡು ಭಾಗದಲ್ಲಿ ಶೇ.18 ಹಾಗೂ ಕರಾವಳಿ ಭಾಗದಲ್ಲಿ ಶೇ.19ರಷ್ಟು ಮಳೆ ಕೊರತೆಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ರಾಜ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ. ಆದರೆ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಈ ಸಂಜೆ.ಕಾಮ್‌
ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕರಾದ ಸಿ.ಎಸ್.ಪಾಟೀಲ್ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.
ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಎರಡುಮೂರು ದಿನ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಸದ್ಯ ಕೆಲದಿನ ಮುಂಗಾರು ದುರ್ಬಲವಾಗಿಯೇ ಮುಂದುವರೆಯುವ ಸೂಚನೆಗಳು ಕಂಡುಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement