ಮಹಿಳೆಯರಿಗೆ ಸ್ವಾತಂತ್ರ್ಯ: ತಾಲಿಬಾನ್ ಮಾತು ನಂಬುತ್ತಿಲ್ಲ ಅಫಘನ್‌ ಮಹಿಳೆಯರು, ಅಮೆರಿಕ ಬಗ್ಗೆ ಆಕ್ರೋಶ

ಕಾಬೂಲ್: ಅಫಘಾನಿಸ್ತಾನದ ಪ್ರಜಾಸತ್ತಾತ್ಮ ಸರ್ಕಾರ ಅಧಿಕೃತವಾಗಿ ಪತನಗೊಂಡಿದ್ದು ತಾಲಿಬಾನ್ ಉಗ್ರರು ರಾಷ್ಟ್ರ ರಾಜಧಾನಿಯ ಅಧ್ಯಕ್ಷರ ಅರಮನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ತಾಲಿಬಾನ್ ಉಗ್ರರ ಆಡಳಿತವನ್ನು ಈ ಹಿಂದೆ ಐದು ವರ್ಷ (1996ರಿಂದ 2001) ಅನುಭವಿಸಿರುವ ಅಫಘನ್ ಪ್ರಜೆಗಳು ಅಕ್ಷರಶಃ ದಿಗ್ಭ್ರಾಂತರಾಗಿದ್ದಾರೆ. ತಮ್ಮನ್ನು ಈ ಸ್ಥಿತಿಗೆ ದೂಡಿದ ಅಮೆರಿಕದ ಬಗ್ಗೆ ಅವರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕಾಲಕ್ಕೆ ತಕ್ಕಂತೆ ನಾವೂ ಬದಲಾಗಿದ್ದೇವೆ ಎಂದು ಹೇಳಿರುವ ತಾಲಿಬಾನ್ ಉನ್ನತ ಕಮಾಂಡರ್​ಗಳು, ಜನರು ಹೆದರುವ ಅಥವಾ ದೇಶ ತೊರೆಯುವ ಅಗತ್ಯವಿಲ್ಲ. ಮಹಿಳೆಯರಿಗೆ ವಿದ್ಯಾಭ್ಯಾಸ ಮತ್ತು ಉದ್ಯೋಗ ಹಕ್ಕು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ವಾಕ್ಯದ ಬೆನ್ನಿಗೇ ಮಹಿಳೆಯರು ಹಿಜಾಬ್ ತೊಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.ಆದರೆ ಇವರ ಮಾತನ್ನು ನಂಬಲು ಅಫಘನ್‌ ಮಹಿಳೆಯರು ಸಿದ್ಧರಿಲ್ಲ.
ಕಳೆದ ಅವಧಿಯ ತಾಲಿಬಾನ್ ಅಡಳಿತದಲ್ಲಿ ಅಕ್ರಮ ಸಂಬಂಧ ಆರೋಪದ ಮೇಲೆ ಮಹಿಳೆಯರನ್ನು ಕಲ್ಲುಗಳಿಂದ ಹೊಡೆದು ಸಾಯಿಸುವುದು, ಛಡಿಯೇಟಿನ ಶಿಕ್ಷೆ ವಿಧಿಸುವುದು ಸಾಮಾನ್ಯ ಎನಿಸಿತ್ತು. ಐದು ವರ್ಷಗಳ ಅವಧಿಯಲ್ಲಿ ಮಹಿಳೆಯರು ನರಕಯಾತನೆ ಅನುಭವಿಸಿದ್ದರು. ಈ ಕರಾಳ ನೆನಪುಗಳ ಕಾರಣಕ್ಕೇ ಅಫಘಾನಿಸ್ತಾನದ ಮಹಿಳೆಯರು ತಾಲಿಬಾನ್ ಎಂದರೆ ಸಾಕು ಬೆಚ್ಚಿಬೀಳುತ್ತಿದ್ದಾರೆ.
ಕಾಬೂಲ್ ವಶಕ್ಕೆ ಪಡೆದುಕೊಂಡ ನಂತರ ಶಿಕ್ಷೆಗಳ ಬಗ್ಗೆ ಮಾತನಾಡಿರುವ ತಾಲಿಬಾನ್ ವಕ್ತಾರರು, ‘ವಿಚಾರಣೆ ನಡೆಸಿ ಶಿಕ್ಷೆ ನೀಡುವ ಅಧಿಕಾರವನ್ನು ನ್ಯಾಯಾಲಯಗಳಿಗೆ ಬಿಟ್ಟುಕೊಡುತ್ತೇವೆ. ಮಾಧ್ಯಮಗಳ ಮುಕ್ತ ಕಾರ್ಯನಿರ್ವಹಣೆಗೂ ಅವಕಾಶ ಕೊಡುತ್ತೇವೆ. ಪತ್ರಕರ್ತರು ಯಾರನ್ನು ಬೇಕಾದರೂ ಟೀಕಿಸಬಹುದು. ಆದರೆ ಯಾವೊಬ್ಬ ವ್ಯಕ್ತಿಯ ಚಾರಿತ್ರ್ಯಕ್ಕೆ ಕಳಂಕು ಬಳಿಯುವಂಥ ಸುದ್ದಿ ಪ್ರಕಟಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕಂದಹಾರ್​ ನಗರವನ್ನು ತಾಲಿಬಾನ್ ತನ್ನ ಸುಪರ್ದಿಗೆ ತೆಗೆದುಕೊಂಡ ತಕ್ಷಣ ಅಲ್ಲಿನ ಅಝೀಜಿ ಬ್ಯಾಂಕ್​ನಲ್ಲಿದ್ದ ಒಂಬತ್ತು ಮಹಿಳಾ ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಸೂಚಿಸಿತ್ತು. ಅದೇ ಮಹಿಳೆಯರ ಪುರುಷ ಸಂಬಂಧಿಗಳಿಗೆ ಈ ಕೆಲಸ ಕೊಡುವುದಾಗಿ ತಾಲಿಬಾನ್ ಆಡಳಿತಗಾರರು ಹೇಳಿದ್ದರು.
ಅಫಘಾನಿಸ್ತಾನದಲ್ಲಿರುವ ವಿದೇಶಿಯರು ದೇಶ ತೊರೆಯಲು ಅವಕಾಶ ನೀಡುತ್ತೇವೆ. ಅವರು ಉಳಿಯಲು ಬಯಸಿದರೆ ತಾಲಿಬಾನ್ ಆಡಳಿತದೊಂದಿಗೆ ನೋಂದಾಯಿಸಿಕೊಳ್ಳಬೇಕು. ಇಲ್ಲಿನ ಜನರು ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಇಲ್ಲಿಯೇ ಉಳಿದು ದೇಶದ ಭವಿಷ್ಯ ನೋಡಬೇಕು ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.
ಅಫಘನ್ ಸೇನೆಯು ಆಘಾತಕಾರಿ ಸೋಲಿನ ಸರಮಾಲೆಗಳ ಬೆನ್ನಲ್ಲೇ ತಾಲಿಬಾನ್ ಉಗ್ರರು ಕಾಬೂಲ್ ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಸೇನೆಯನ್ನು ಯುದ್ಧಕೋರ ನಾಯಕರ ಕೈಗೆ ಒಪ್ಪಿಸಿದ್ದ ಅಫಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಸರ್ಕಾರ ತನ್ನ ತಪ್ಪುಗಳಿಗೆ ತಕ್ಕ ಬೆಲೆಯನ್ನೇ ತೆತ್ತಿದೆ. ಕಾಬೂಲ್​ನಲ್ಲಿ ಸೇನಾ ಜಮಾವಣೆ ಮಾಡುವ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ಶಾಂತಿ ಮಾತುಕತೆಗೆ ಅನಿವಾರ್ಯವಾಗಿ ಮುಂದಾಗಬೇಕಾಯಿತು. ಇದೀಗ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದಾರೆ. ಈ ನಡುವೆ ಅಫಘಾನಿಸ್ತಾನದ ಅಧ್ಯಕ್ಷ ಸಲೇಹ್‌ ಅವರು ತಾನು ತಾಲಿಬಾನಿಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇದು ಮುಂದೆಯೂ ಶಾಂತಿಯುತವಾಗಿ ಮುಂದುವರಿಯುವ ಸೂಚನೆ ಸದ್ಯಕ್ಕಿಲ್ಲ.

ಪ್ರಮುಖ ಸುದ್ದಿ :-   ಇಸ್ರೇಲ್ ವೈಮಾನಿಕ ದಾಳಿ ಲೆಬನಾನಿನಲ್ಲಿ 18 ಮಂದಿ ಸಾವು ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement