ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ ಸರ್ಕಾರ ಬಹಿರಂಗಪಡಿಸಬೇಕಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ದೇಶದ ಭದ್ರತೆಗೆ ಧಕ್ಕೆ ತರುವ ಯಾವುದೇ ವಿಷಯವನ್ನು ಸರ್ಕಾರ ಬಹಿರಂಗಪಡಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ನ್ಯಾಯಪೀಠ ಮಂಗಳವಾರ ಹೇಳಿದೆ.
ಪೆಗಾಸಸ್​ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದೆ. ಈ ವೇಳೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪೆಗಾಸಸ್ ವಿಚಾರದಲ್ಲಿ ಬಚ್ಚಿಡುವಂಥದ್ದು ಕೇಂದ್ರ ಸರ್ಕಾರಕ್ಕೆ ಏನೂ ಇಲ್ಲ. ಈ ವಿಷಯ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು ಎಂದು ತಿಳಿಸಿದರು.
ಗೂಢಚರ್ಚೆಗೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಕೆಯಾಗಿದೆ ಎಂಬ ಆರೋಪದ ಬಗ್ಗೆ ಸರ್ಕಾರ 10 ದಿನಗಳ ಒಳಗೆ ಪ್ರತಿಕ್ರಿಯಿಸಬೇಕು. ಸರ್ಕಾರದ ಪ್ರತಿಕ್ರಿಯೆ ಗಮನಿಸಿದ ನಂತರ ಈ ವಿಚಾರದ ಬಗ್ಗೆ ನಿರ್ಧರಿಸಲು ಸಮಿತಿ ರಚಿಸಬೇಕೇ? ಬೇಡವೇ ಎನ್ನುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು.
ಈ ವಿಚಾರವನ್ನು ಸಾರ್ವಜನಿಕ ಚರ್ಚೆಯ ವಿಷಯವಾಗಿಸಲು ಸಾಧ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​ಗೆ ತಿಳಿಸಿದರು. ಇಂಥ ಸಾಫ್ಟ್​ವೇರ್​ಗಳನ್ನು ಎಲ್ಲ ದೇಶಗಳೂ ಖರೀದಿಸುತ್ತವೆ. ತಮ್ಮ ವಿರುದ್ಧ ಈ ಸ್ಪೈವೇರ್ ಬಳಸಿಲ್ಲ ಎಂಬುದನ್ನು ಖಾಸಗಿಯಾಗಿ ಖಾತ್ರಿಪಡಿಸುವಂತೆ ಅರ್ಜಿದಾರರು ಕೋರುತ್ತಿದ್ದಾರೆ. ಒಂದು ವೇಳೆ ನಾವು ಹೀಗೆ ಸ್ಪಷ್ಟನೆ ನೀಡಿದರೆ ಭಯೋತ್ಪಾದಕರು ಎಚ್ಚೆತ್ತುಕೊಂಡು ಮುಜಾಗ್ರತೆ ವಹಿಸುತ್ತಾರೆ. ಅದರಿಂದ ದೇಶದ ಭದ್ರತೆ ಧಕ್ಕೆಯಾಗುತ್ತದೆ. ನಾವು ನ್ಯಾಯಾಲಯದಿಂದ ಯಾವುದನ್ನೂ ಮುಚ್ಚಿಡುವುದಿಲ್ಲ ಎಂದು ಮೆಹ್ತಾ ತಿಳಿಸಿದರು.
ಸರ್ಕಾರವು ತಜ್ಞರ ಸಮಿತಿಗೆ ಮಾಹಿತಿ ನೀಡಬಹುದು. ಇಂಥ ಸಮಿತಿಯು ತಟಸ್ಥರನ್ನು ಒಳಗೊಂಡಿರುತ್ತದೆ. ಸಂವಿಧಾನಾತ್ಮಕ ಅಧಿಕಾರ ಹೊಂದಿರುವ ನ್ಯಾಯಾಲಯವು ಇಂಥ ವಿಷಯಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಲು ಇಚ್ಛಿಸುತ್ತದೆಯೇ? ನಾವು ಸಮಿತಿಗೆ ನೀಡುವ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿದರೆ ಅದು ಸಾರ್ವಜನಿಕ ಚರ್ಚೆಗೆ ಒಳಪಡುವುದಿಲ್ಲವೇ? ಇಂಥ ಸೂಕ್ಷ್ಮ ವಿಷಯವನ್ನು ರೋಚಕಗೊಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪೆಗಾಸಸ್ ಬಳಕೆಯ ಕುರಿತು ಅರ್ಜಿದಾರರು ಮಾಡಿರುವ ಆರೋಪಗಳನ್ನು ಕೇಂದ್ರ ಸರ್ಕಾರವು ಸೋಮವಾರ ಸಾರಾಸಗಟಾಗಿ ನಿರಾಕರಿಸಿತ್ತು. ಈ ವಿಚಾರದ ಬಗ್ಗೆ ಸಮಾಜದಲ್ಲಿ ಕಟ್ಟುಕತೆಗಳು ಹರಡಿವೆ. ಗೊಂದಲ ಪರಿಹರಿಸಲು ನಾವು ಈ ಕ್ಷೇತ್ರದಲ್ಲಿ ನೈಪುಣ್ಯ ಹೊಂದಿರುವ ತಜ್ಞರ ಸಮಿತಿ ರಚಿಸಲು ಸಿದ್ಧರಿದ್ದೇವೆ. ಸಮಿತಿಯು ಈ ವಿಚಾರವನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement