ದಿಢೀರನೇ ದೆಹಲಿಗೆ ತೆರಳಿದ ಸಚಿವ ಆನಂದ್ ಸಿಂಗ್..!

ನವದೆಹಲಿ: ನೀಡಿರುವ ಖಾತೆಗಾಗಿ ಮುನಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬುಧವಾರ ರಾತ್ರಿ ದಿಢೀರನೇ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಯಲ್ಲಾಪುರ ಪ್ರವಾಸದಲ್ಲಿದ್ದ ಸಚಿವ ಆನಂದ್ ಸಿಂಗ್ ದಿಢೀರನೇ ಗೋವಾ ಮೂಲಕ ಕಳೆದ ರಾತ್ರಿ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಅವರು ಇಂದು (ಬುಧವಾರ) ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಮಂಗಳವಾರ ಯಲ್ಲಾಪುರಕ್ಕೆ ಬಂದಿದ್ದ ಆನಂದ್ ಸಿಂಗ್ ಅವರಿಗೆ ನವದೆಹಲಿಗೆ ಬರುವಂತೆ ಅರುಣ್ ಸಿಂಗ್ ಅವರೇ ರಾಜ್ಯ ನಾಯಕರ ಮೂಲಕ ಸೂಚನೆ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ತಕ್ಷಣವೇ ಅವರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆ.4ರಂದು ಸಂಪುಟ ರಚನೆ ಮಾಡಿದ್ದರು. ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದ ಅವರು ಮುನಿಸಿಕೊಂಡು ತಮ್ಮ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಒಂದು ಹಂತದಲ್ಲಿ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ಸಹ ನೀಡಲು ಮುಂದಾಗಿದ್ದರು.
ಕೊನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರು ಮನವೊಲಿಸಿದ್ದರು. ಆದರೆ ಆನಂದ್‍ಸಿಂಗ್ ಅಧಿಕಾರ ಸ್ವೀಕರಿಸದೆ ತಮ್ಮ ರಾಜಕೀಯ ನಡೆ ಏನೆಂಬುದನ್ನು ನಿಗೂಢವಾಗಿಯೇ ಇಟ್ಟಿದ್ದರು.ಇದೀಗ ಏಕಾಏಕಿ ದೆಹಲಿಗೆ ತೆರಳಿರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement