ಭಾರತದಲ್ಲಿ 2ನೇ ಡೋಸ್ ಪಡೆದ 87 ಸಾವಿರ ಜನರಿಗೆ ಕೋವಿಡ್ ಸೋಂಕು ಪತ್ತೆ,ಕೇರಳದ ಪಾಲು ಶೇ.46: ವರದಿ

ನವದೆಹಲಿ: ದೇಶದಲ್ಲಿ 2 ಡೋಸ್ ಲಸಿಕೆ ಪಡೆದ 87,000 ಕ್ಕೂ ಹೆಚ್ಚು ಜನರಲ್ಲಿ ಮತ್ತೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಬಳಿಕವೂ ದೇಶಾದ್ಯಂತ ಸುಮಾರು 87,000 ಕ್ಕೂ ಹೆಚ್ಚು ಜನರಿಗೆ ಮತ್ತೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಇದರಲ್ಲಿ ಶೇ.46 ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕೇರಳದಲ್ಲಿ ಲಸಿಕೆಯ ಮೊದಲ ಡೋಸ್ ಪಡೆದ 80,000 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಹಾಗೂ ಎರಡನೇ ಡೋಸ್ ಪಡೆದ 40,000ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.
ಕೇರಳದಲ್ಲಿ ಪ್ರತಿನಿತ್ಯದ ಪ್ರಕರಣಗಳು ಏರಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಲಸಿಕೆ ಪಡೆದು ಸೋಂಕಿಗೆ ಒಳಗಾಗಿರುವವರ ಸುಮಾರು 200 ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್‌ ಮಾಡಲಾಗಿದೆ. ಆದರೆ ಈವರೆಗೆ ರೂಪಾಂತರ ಪ್ರಕರಣಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲೂ ಮೂರನೇ ಅಲೆ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿರುವುದು ಈಗಾಗಲೇ ಆತಂಕ ಸೃಷ್ಟಿಸಿದೆ. ಈ ನಡುವೆ ಲಸಿಕೆ ಪಡೆದವರಲ್ಲೂ ಸೋಂಕು ಪತ್ತೆಯಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೇರಳವು ಅತಿ ಹೆಚ್ಚು ದೈನಂದಿನ ಕೋವಿಡ್ ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿದ್ದು, ಗುರುವಾರ 21,427 ಪ್ರಕರಣಗಳು ಮತ್ತು 179 ಸಾವುಗಳನ್ನು ವರದಿ ಮಾಡಿದೆ. ಶೇಕಡಾ 100 ರಷ್ಟು ವ್ಯಾಕ್ಸಿನೇಷನ್ ಆದ ವಯನಾಡಿನಿಂದಲೂ ಹೊಸ ಪ್ರಕರಣಗಳು ವರದಿಯಾಗಿವೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement