ಸೆ.13ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ:ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 24ರ ವರೆಗೆ ವಿಧಾನಮಂಡಲ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ಅವರು ತಿಳಿಸಿದರು.
ನೂತನ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿಧಾನಮಂಡಲ ಅಧಿವೇಶನ ನಡೆಸುವ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 24ರವರೆಗೆ 10 ದಿನಗಳ ಕಾಲ ಅಧಿವೇಶನ ಬೆಂಗಳೂರಿನ ವಿಧಾನಸೌಧದಲ್ಲಿಯೇ ನಡೆಯಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಸಭೆಯಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸುವ ಬಗ್ಗೆ ವಿಶೇಷ ಒತ್ತು ನೀಡಲಾಯಿತು. ರಾಜ್ಯದಲ್ಲಿ ಸದ್ಯ ಕೋವಿಡ್-19 ನಿಯಂತ್ರಣದಲ್ಲಿರುವುದರಿಂದ ಮೂರನೇ ಅಲೆ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿಲ್ಲ. ಸಚಿವ ಆನಂದ್ ಸಿಂಗ್ ಗೈರು ಬಗ್ಗೆ ಕೂಡ ಚರ್ಚೆ ಬಂದಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಸಭೆಯಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸುವ ಬಗ್ಗೆ ವಿಶೇಷ ಒತ್ತು ನೀಡಲಾಯಿತು. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಕೂಡ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ಆರೋಗ್ಯ ಪೂರೈಕೆದಾರರ ಹುದ್ದೆಗಳನ್ನು ಸೃಷ್ಟಿಸುವುದು ಮತ್ತು ರೋಸ್ಟರ್ ಮೆರಿಟನ್ನು ಗುತ್ತಿಗೆ ಆಧಾರದಲ್ಲಿ ಮೂರು ವರ್ಷದವರೆಗೆ ನೇಮಕ ಮಾಡಿಕೊಳ್ಳುವುದು, ಆರ್ ಜಿಯುಜಿಎಸ್ ಸಂಯೋಜಿತ ಕೋರ್ಸ್ ನಡಿ ನರ್ಸಿಂಗ್ ಓದಿರುವ ವಿದ್ಯಾರ್ಥಿಗಳನ್ನು ಕೂಡ ಇದರಡಿ ನೇಮಕಾತಿ ಮಾಡುವ ಬಗ್ಗೆ ತೀರ್ಮನಿಸಲಾಗಿದೆ.
ಆರೋಗ್ಯ ಇಲಾಖೆಯ 1ರಿಂದ 5 ಹಂತದ ಕಾರ್ಯಕ್ರಮಗಳನ್ನು ಸೇರಿಸಲಾಗುತ್ತದೆ. ಪರಿಕರ ಒದಗಿಸಲು ಲಭ್ಯ ಮಾಡಿಕೊಡುತ್ತೇವೆ. ಕಟ್ಟಡ ಲಭ್ಯವಿದ್ದರೆ ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ನಿಗದಿಪಡಿಸುತ್ತೇವೆ ಎಂದು ಹೇಳಿದರು.
ಕಲಬುರ್ಗಿ ಜಿಲ್ಲೆಯ ಮಿನಿ ವಿಧಾನಸೌಧಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದಕ್ಕೆ ಇನ್ನೂ 2.27 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡಲು ನಿರ್ಧರಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 9 ಲಕ್ಷ ಟನ್ ತ್ಯಾಜ್ಯ ಹೊರಬರುತ್ತಿರುವ ಕುರಿತು ಹೈಕೋರ್ಟ್ ನ ಆದೇಶದಂತೆ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ ತ್ಯಾಜ್ಯ ವಿಲೇವಾರಿ ಕಾರ್ಯ ಮಾಡಲಿದೆ.
ಆಜಾದ್ ಕಿ ಅಮೃತ ಮಹೋತ್ಸವದ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಂಗವಾಗಿ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರಗಳನ್ನು ಸ್ವಚ್ಛ ಮತ್ತು ಸುಂದರಗೊಳಿಸಲು 75 ಕೋಟಿ, ಆರೋಗ್ಯ ಇಲಾಖೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement