ಹುಬ್ಬಳ್ಳಿಯಿಂದ ಉಳವಿ, ಧರ್ಮಸ್ಥಳ, ಇಡಗುಂಜಿಗೆ ಬಸ್ ಸಂಚಾರ ಪುನಾರಂಭ

ಹುಬ್ಬಳ್ಳಿ: ಕೋವಿಡ್ ಎರಡನೆ ಅಲೆ ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಉಳವಿ, ಧರ್ಮಸ್ಥಳ, ಇಡಗುಂಜಿ ಮತ್ತಿತರ ಧಾರ್ಮಿಕ ಸ್ಥಳಗಳಿಗೆ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ ಎಂದು ಹುಬ್ಬಳ್ಳಿ ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಕೋವಿಡ್ ಎರಡನೆ ಅಲೆ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಈ ಕ್ಷೇತ್ರಗಳಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ನಿರ್ಬಂಧಗಳ ಸಡಿಲಿಕೆ ಮಾಡಿದ್ದು ಧಾರ್ಮಿಕ ಕ್ಷೇತ್ರಗಳಿಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅದ್ದರಿಂದ ಸಾರ್ವಜನಿಕರ ಬೇಡಿಕೆ ಮೇರೆಗೆ ಹುಬ್ಬಳ್ಳಿಯಿಂದ ಉಳವಿ ಮತ್ತು ಇಡಗುಂಜಿಗೆ ಬೆಳಿಗ್ಗೆ ಸಮಯದಲ್ಲಿ ಹಾಗೂ ಧರ್ಮಸ್ಥಳಕ್ಕೆ ಹಗಲು ಮತ್ತು ರಾತ್ರಿ ಸಮಯದಲ್ಲಿ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಈ ಬಸ್ ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಉಳವಿಗೆ ತೆರಳುವ ಬಸ್ ಬೆಳಿಗ್ಗೆ 8:15ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಉಳವಿಗೆ ಮಧ್ಯಾಹ್ನ12:15 ಕ್ಕೆ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 2 ಕ್ಕೆ ಬಿಟ್ಟು ಹುಬ್ಬಳ್ಳಿಗೆ ಸಂಜೆ 6ಕ್ಕೆ ಆಗಮಿಸುತ್ತದೆ.
ಇಡಗುಂಜಿಗೆ ಹೋಗುವ ಬಸ್ ಬೆಳಿಗ್ಗೆ 7ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ.12ಕ್ಕೆ ಇಡಗುಂಜಿ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 2ಕ್ಕೆ ಬಿಟ್ಟು ಸಂಜೆ 7ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.
ಧರ್ಮಸ್ಥಳಕ್ಕೆ ಹೋಗುವ ಹಗಲು ಬಸ್ ಬೆಳಿಗ್ಗೆ 6ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ‌.ಸಂಜೆ 5-30ಕ್ಕೆ ಧರ್ಮಸ್ಥಳ ತಲುಪುತ್ತದೆ.ಮರುದಿನ ಧರ್ಮಸ್ಥಳದಿಂದ ಬೆಳಿಗ್ಗೆ 5-30ಕ್ಕೆ ಬಿಟ್ಟು ಸಂಜೆ 4ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.ರಾತ್ರಿ ಸಾರಿಗೆ ಬಸ್ ಸಂಜೆ6ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಮರುದಿನ ಬೆಳಿಗ್ಗೆ 5ಕ್ಕೆ ಧರ್ಮಸ್ಥಳ ತಲುಪುತ್ತದೆ. ಸಂಜೆ 6-15ಕ್ಕೆ ಧರ್ಮಸ್ಥಳ ದಿಂದ ಬಿಟ್ಟು ಮರುದಿನ ಬೆಳಿಗ್ಗೆ 5-15ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ನಿರ್ದೇಶನಗಳ ಪ್ರಕಾರ ಧರ್ಮಸ್ಥಳದಲ್ಲಿ ಸದ್ಯಕ್ಕೆ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ದೇವಸ್ಥಾನ ತೆರೆಯುತ್ತಿದ್ದು ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ವಾರಾಂತ್ಯ ದಿನಗಳಂದು ಶನಿವಾರ ಮತ್ತು ರವಿವಾರ ದೇವಸ್ಥಾನವು ಮುಚ್ಚಿರುತ್ತದೆ.
ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮತ್ತಷ್ಟು ಧಾರ್ಮಿಕ ಸ್ಥಳಗಳಿಗೆ ಬಸ್ ಸಂಚಾರ ಆರಂಭಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ‌.

ಪ್ರಮುಖ ಸುದ್ದಿ :-   ಪತಿ ಸಾವಿನ ಸುದ್ದಿ ತಿಳಿದ ನಂತರವೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪತ್ನಿ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement