ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಈಗ ಸಿಎಂ ಬೊಮ್ಮಾಯಿ ಮುಂದಿರುವ ಮತ್ತೊಂದು ಸವಾಲು

ಬೆಂಗಳೂರು: ಸಚಿವ ಸಂಪುಟ ಹಾಗೂ ಖಾತೆಗಳನ್ನು ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನ ಎದುರಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವುದು ಸವಾಲಾಗಿದೆ.
ಈವರೆಗೂ ಕೋವಿಡ್ ಮತ್ತು ಕೆಲವು ಜಿಲ್ಲೆಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತು ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ಕಾರಣಕ್ಕಾಗಿ ಉಸ್ತುವಾರಿಗಳನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು.
ಈಗ ಜಿಲ್ಲಾ ಉಸ್ತುವಾರಿ ಸಚಿವರನ್ನುನೇಮಕ ಮಾಡಬೇಕಾಗಿರುವುದರಿಂದ ಕೆಲವರು ಸಚಿವರು ತಮಗೆ ಇಂಥದ್ದೇ ಜಿಲ್ಲೆಯ ಉಸ್ತುವಾರಿಯನ್ನೇ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಿನ ಉಸ್ತುವಾರಿಗಾಗಿ ಮೂವರು ಪ್ರಭಾವಿ ಸಚಿವರು ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಬೆಂಗಳೂರು ಉಸ್ತುವಾರಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅದೇ ಅನುಸರಿಸುವ ಸಾಧ್ಯತೆಯೂ ಇದೆ.
ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಬೆಂಗಳೂರು ನಗರಕ್ಕೆ ತಮ್ಮನ್ನೇ ಉಸ್ತುವಾರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವುದರಿಂದ ತಮ್ಮ ಹಿಂಬಾಲಕರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದು, ಆ ಮೂಲಕ ನಗರದ ಮೇಲೆ ತಮ್ಮ ಪ್ರಭಾವ ಉಳಿಸಿಕೊಳ್ಳುವುದು ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗುತ್ತಿದೆ.
ಬೆಂಗಳೂರನ್ನು ನೀಡದಿದ್ದರೂ ತಮಗೆ ಮೈಸೂರು ಜಿಲ್ಲೆಯ ಉಸ್ತುವಾರಿ ನೀಡಬೇಕೆಂಬುದು ವಸತಿ ಸಚಿವ ವಿ.ಸೋಮಣ್ಣನವರ ಆಗ್ರಹವಾಗಿದೆ. ಸದ್ಯ ಅವರನ್ನು ರಾಯಚೂರು ಜಿಲ್ಲೆಗೆ ತಾತ್ಕಾಲಿಕ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು.ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಮೈಸೂರು ಉಸ್ತುವಾರಿಯಾಗಿ ಹಾಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ನೀಡಲಾಗಿತ್ತು.
ಸಚಿವ ಎಸ್.ಟಿ.ಸೋಮಶೇಖರ್ ತಮಗೆ ಅದೇ ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೇಳಿದ ಖಾತೆಯನ್ನು ಕೊಡಲಿಲ್ಲ ಎಂದು ಮುನಿಸಿಕೊಂಡಿರುವ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿಗೆ ಪಟ್ಟು ಹಿಡಿದಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಕೊಡದಿದ್ದರೆ ಬೆಂ.ಗ್ರಾಮಾಂತರ ಉಸ್ತುವಾರಿಗೆ ತಮ್ಮನ್ನು ಪರಿಗಣಸಬೇಕೆಂಬುದು ಅಶೋಕ ಅವರ ಒತ್ತಾಯವಾಗಿದೆ.
ಜೆಡಿಎಸ್-ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯ ಉಸ್ತುವಾರಿಯ ಸಹವಾಸವೇ ಬೇಡ ಎಂದು ಡಾ.ಅಶ್ವಥ್ ನಾರಾಯಣ ತಮಗೆ ಬೆಂಗಳೂರು ನಗರದ ಹೊಣೆಗಾರಿಕೆಯನ್ನುವಿನಂತಿಸಿಕೊಂಡಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆಯ ಕಣವಾಗಿರುವ ಈ ಜಿಲ್ಲೆಯ ಉಸ್ತುವಾರಿಬೇಡ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ ಎನ್ನಲಾಗಿದೆ. ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಮ್ಮದೇ ಜಿಲ್ಲೆ ಬಗ್ಗೆ ಆಸಕ್ತಿ ಹೊಂದಿದ್ದಾರೆ.
ಅವರಿಗೆ ಯಾದಗಿರಿ ಜಿಲ್ಲೆಯ ತಾತ್ಕಾಲಿಕ ಉಸ್ತುವಾರಿಯಾಗಿ ನೇಮಿಸಲಾಗಿದೆ. ಆ ಜಿಲ್ಲೆಗೆ ಬಂದುಹೋಗಲು ಹೆಚ್ಚಿನ ಸಮಯ ಅವಕಾಶ ಬೇಕಾಗಿರುವುದರಿಂದ ತುಮಕೂರು ಇಲ್ಲವೇ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ನೀಡಬೇಕೆಂಬುದು ನಾಗೇಶ್ ಅವರ ಮನವಿ.
ಶಿವಮೊಗ್ಗ ಜಿಲ್ಲೆಗೆ ಹಿರಿತನದಲ್ಲಿ ತಮ್ಮನ್ನೇ ಪರಿಗಣಿಸಬೇಕೆಂದು ಕೆ.ಎಸ್.ಈಶ್ವರಪ್ಪ ಪಟ್ಟು ಹಿಡಿದಿದ್ದರೆ, ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ತವರು ಜಿಲ್ಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಶಿವಮೊಗ್ಗ ಉಸ್ತುವಾರಿ ನೀಡಲು ಸಾಧ್ಯವಾಗದಿದ್ದರೆ ಚಿಕ್ಕಮಗಳೂರು ಜಿಲ್ಲೆ ಕೊಡಬೇಕೆಂಬುದು ಅವರ ಮನವಿಯಾಗಿದೆ.
ಬಿಜೆಪಿಯ ಭದ್ರಕೋಟೆ ಎನ್ನಿಸಿರುವ ಉಡುಪಿ ಉಸ್ತುವಾರಿಗೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಸುನೀಲ್‍ಕುಮಾರ್ ನಡುವೆ ಸ್ಪರ್ಧೆ ಇದೆ. ಈ ಮೊದಲು ಕೋಟಾ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯಾಗಿದ್ದರು. ಸಚಿವ ಎಸ್.ಅಂಗಾರ ಅದೇ ಜಿಲ್ಲೆಯವರಾಗಿರುವುದರಿಂದ ಸಹಜವಾಗಿ ಅವರಿಗೆ ಉಸ್ತುವಾರಿ ನೀಡುವ ಸಾಧ್ಯತೆಯಿದೆ.
ಹೀಗಾಗಿ ಕೋಟಾಶ್ರೀನಿವಾಸ್ ಪೂಜಾರಿ ಮತ್ತು ಸುನೀಲ್‍ಕುಮಾರ್ ಅವರಲ್ಲಿ ಯಾರಿಗೆ ಕೊಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಶಿವರಾಮ್ ಹೆಬ್ಬಾರ್ ಒಬ್ಬರೇ ಇದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸಚಿವರಾದ ಉಮೇಶ ಕತ್ತು ಹಾಗೂ ಶಶಿಕಲಾ ಜೊಲ್ಲೆ ಅವರಲ್ಲಿ ಯಾರು ಎಂಬ ಪ್ರಶ್ನೆ ಇದೆ. ಇಬ್ಬರೂ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ.
ಗೋವಿಂದ ಕಾರಜೋಳ ಅವರಿಗೆ ಈಗ ತಾತ್ಕಾಲಿಲಕವಅಗಿ ಉಸ್ತುವಾರಿ ನೀಡಲಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಮ್ಮನ್ನು ಈ ಬಾರಿಯಾದರೂ ತವರು ಜಿಲ್ಲೆ ಬಾಗಲಕೋಟೆ ಇಲ್ಲವೇ ಧಾರವಾಡಕ್ಕೆ ಉಸ್ತುವಾರಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ತವರು ಜಿಲ್ಲೆಯ ಮೇಲೆ ಖುದ್ದು ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ ಕೂಡ ಕಣ್ಣಿಟಿದ್ದಾರೆ. ಧಾರವಾಡಕ್ಕೆ ಶಂಕರ್ ಪಟೇಲ್ ಮುನೇನಕೊಪ್ಪ ಅವರಿದ್ದಾರೆ.
ಗದಗ ಜಿಲ್ಲೆಗೆ ಸಿ.ಸಿ.ಪಾಟೀಲ ಉಸ್ತುವಾರಿಯಾಗಲಿದ್ದಾರೆ ಎನ್ನಲಾಗಿದೆ. ಹಾವೇರಿ ಜಿಲ್ಲೆ ಉಸ್ತುವಾರಿ ಈ ಬಾರಿಯಾದರೂ ನನಗೆ ಕೊಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯಿಂದ ಮುಕ್ತಿಗೊಳಿಸಿ ಹಾವೇರಿ ನೀಡಬೇಕೆಂಬುದು ಅವರ ಮನವಿಯಾಗಿದೆ.
ಸಾರಿಗೆ ಸಚಿವ ಶ್ರೀರಾಮುಲು ಈ ಬಾರಿಯಾದರೂ ಬಳ್ಳಾರಿಯನ್ನು ಕೊಡಬೇಕೆಂದು ಕೋರಿದ್ದಾರೆ.
ಬೀದರಿಗೆ ಪ್ರಭು ಚವ್ಹಾಣ್, ಚಿಕ್ಕಬಳ್ಳಾಪುರಕ್ಕೆ ಡಾ.ಸುಧಾಕರ್, ಕೋಲಾರಕ್ಕೆ ಮುನಿರತ್ನ ನಾಯ್ಡು, ಕೊಡಗಿಗೆ ಕೋಟಾ ಶ್ರೀನಿವಾಸ್ ಪೂಜಾರಿ, ಅವರಿಗೆ ನೀಡುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಗೋಪಾಲಕೃಷ್ಣ ಭಟ್ಟ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement