ಕರ್ನಾಟಕದಲ್ಲಿ ಇಂದಿನಿಂದ 9ರಿಂದ 12ನೇ ತರಗತಿಗಳು ಆರಂಭ

ಬೆಂಗಳೂರು: ಬಹುದೊಡ್ಡ ಸವಾಲಿನೊಂದಿಗೆ ಒಂದೂವರೆ ವರ್ಷಗಳ ಬಳಿಕ ರಾಜ್ಯಾದ್ಯಂತ ಶಾಲೆಗಳು ಇಂದು (ಸೋಮವಾರ) ಆರಂಭವಾಗುತ್ತಿವೆ.
ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ 2020ರ ಮಾರ್ಚ್‌ ತಿಂಗಳಿನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಆಮೇಲೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿತ್ತಾದರೂ, ಉಳಿದ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನೂ ಸಹ ನಡೆಸಿರಲಿಲ್ಲ.
ಈಗ ಕೊರೊನಾ ಮೂರನೇ ಅಲೆಯ ಆತಂಕದ ಮಧ್ಯೆ ಇಂದಿನಿಂದ 9 ರಿಂದ 12 ತರಗತಿಯ ವರೆಗಿನ ತರಗತಿಗಳು ಪ್ರಾರಂಭವಾಗುತ್ತಿದೆ. ಒಂದೂವರೆ ವರ್ಷದ ಬಳಿಕ ಮಕ್ಕಳು ಮತ್ತೆ ಶಾಲೆಗೆ ಹಿಂದಿರುಗುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಶಾಲಾರಂಭದ ಕುರಿತು ಮಾತನಾಡಿದ್ದಾರೆ.
ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ..
ಶಾಲಾರಂಭದ ಕುರಿತು ತುಮಕೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಇಂದಿನಿಂದ 9 ರಿಂದ 12 ತರಗತಿಯವರೆಗಿನ ಶಾಲೆಗಳು ಪ್ರಾರಂಭವಾಗುತ್ತಿದ್ದು, ಆದರೆ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ತಾಂತ್ರಿಕ ಹಾಗೂ ಮತ್ತಿತರ ಕಾರಣಗಳಿಂದ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಮೂಲಕ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಲಿಲ್ಲ. ಮೊಬೈಲ್ ಮೂಲಕ ನೀಡುವ ಶಿಕ್ಷಣ ಮಕ್ಕಳಲ್ಲಿ ಕಲಿಕಾಸಕ್ತಿ ಕಡಿಮೆ ಆಗುತ್ತಿರುವುದು, ಅಂತರ್ಜಾಲ ಸಮಸ್ಯೆ ಮತ್ತಿತರ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದವು. ಹೀಗಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿರುವುದರಿಂದ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ತಜ್ಞರ ಸಲಹೆ ಮೇರೆಗೆ ಆರಂಭದಲ್ಲಿ ಮೊದಲಿಗೆ 9, 10, 11 ಹಾಗೂ 12ನೇ ತರಗತಿಯನ್ನು ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈಗಾಗಲೇ ರಾಜ್ಯದ ಎಲ್ಲಾ ಡಿಡಿಪಿಐಗಳೊಂದಿಗೆ ಸಭೆ ನಡೆಸಿದ್ದೇವೆ. ಮಕ್ಕಳು ಶಾಲೆಗೆ ಬರಲು ಸಿದ್ಧರಿದ್ದಾರೆ ಎಂಬ ಅಭಿಪ್ರಾಯವನ್ನು ಅವರೆಲ್ಲರೂ ವ್ಯಕ್ತಪಡಿಸಿದ್ದಾರೆ. ಆದರಿಂದ ಶಾಲೆಯನ್ನು ಪ್ರಾರಂಭಿಸಲು ತೀರ್ಮಾನ ಮಾಡಿದ್ದೇವೆ” ಎಂದು ಹೇಳಿದ್ದಾರೆ.

ಪೋಷಕರ ಅನುಮತಿ ಪ್ರಮಾಣ ಪತ್ರ ಕಡ್ಡಾಯ
ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ, ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವ ಬಗ್ಗೆ ನಿಗಾವಹಿಸುವಂತೆ ಡಿಡಿಪಿಐಗಳಿಗೆ ಸೂಚನೆ ಕೊಟ್ಟಿದ್ದೇವೆ. ಶಾಲೆಗೆ ಹಾಜರಾಗುವ ಮಕ್ಕಳು ತಮ್ಮ ಪೋಷಕರಿಂದ ಅನುಮತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಲೇಬೇಕು. ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದವರಿಗೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶವಿಲ್ಲ. ಲಸಿಕೆ ಪಡೆಯದೆ ಕರ್ತವ್ಯಕ್ಕೆ ಹಾಜರಾಗದಿರುವವರ ರಜೆಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಲಾಗುವುದು” ಎಂದು ಬಿ.ಸಿ. ನಾಗೇಶ್ ಎಚ್ಚರಿಸಿದ್ದಾರೆ.

ಶಾಲೆಗೆ ಹಾಜರಾಗದಿರುವವರಿಗೆ ಆನ್‌ಲೈನ್ ತರಗತಿಗಳನ್ನು ಸಹ ಮುಂದುವರೆಸಲಾಗುತ್ತದೆ. ಕೋವಿಡ್‌ ಸಕಾರಾತ್ಮಕ ದರ ಹೆಚ್ಚಿರುವ ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಸೇರಿದಂತೆ 5 ಜಿಲ್ಲೆಗಳಲ್ಲಿ ಶಾಲೆಗಳನ್ನು ಪ್ರಾರಂಭಿಸುತ್ತಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಇಂದಿನಿಂದ ಹೊಸ ಶಿಕ್ಷಣ ನೀತಿ ಜಾರಿ…
ಹೊಸ ಶಿಕ್ಷಣ ನೀತಿ ಆ.23ರಿಂದ ರಾಜ್ಯದಲ್ಲಿ ಜಾರಿಯಾಗಲಿದೆ. ಆನ್‌ಲೈನ್‌ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಚಾಲನೆ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಜೊತೆಗೆ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಲಿದೆ. ಅ.1ರಿಂದ ಕಾಲೇಜು: ಯುಜಿಸಿ ಮಾರ್ಗಸೂಚಿ ಪ್ರಕಾರ ಅ.1ರಿಂದಲೇ ಪ‌ದವಿ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲ ವಿಶ್ವ ವಿದ್ಯಾಲಯಗಳಿಗೂ ಇದು ಅನ್ವಯವಾಗಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement