ತಾಲಿಬಾನ್‌ ವಿರೋಧಿ ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಉಗ್ರರಿಗೆ ಈಗ ಉತ್ತರ ಸೇನೆ ಬಲವಾದ ಪ್ರತಿರೋಧ ನೀಡುತ್ತಿದೆ. ಈಗ ಉತ್ತರ ಸೇನೆಗೆ ತಜಕಿಸ್ತಾನ ಸಹ ಬೆಂಬಲ ನೀಡಿದೆ ಎಂಬ ವರದಿಗಳು ಬಂದಿವೆ.
ದೇಶದ ಗದ್ದುಗೆ ಏರಿದರೂ `ಪಂಜ್‍ಶಿರ್’ ಕಣಿವೆ ಇನ್ನೂ ತಾಲಿಬಾನಿಗಳ ಕೈವಶ ಆಗಿಲ್ಲ. ಹೀಗಾಗಿ ಪಂಜ್‍ಶೀರ್ ಮೂರು ಪ್ರಾಂತ್ಯಗಳನ್ನು ವಶ ಪಡೆಯಲು ತಾಲಿಬಾನ್ ಕಣ್ಣು ಹಾಕಿದೆ. ತಾಲಿಬಾನ್‌ ವಿರುದ್ಧ ನಾರ್ಥರ್ನ್ ಅಲಯನ್ಸ್‌ ಉಗ್ರ ಹೋರಾಟ ಮಾಡುತ್ತಿದೆ. ಈ ಹೋರಾಟದ ಬೆನ್ನಲ್ಲೇ ಪಂಜ್‍ಶೀರ್ ನಲ್ಲಿ ತಜಕಿಸ್ತಾನದ ಹೆಲಿಕಾಪ್ಟರ್ ಗಳ ಹಾರಾಟ ನಡೆಸಿವೆ ಎಂದು ವರದಿಗಳು ತಿಳಿಸಿವೆ.
ಉತ್ತರ ಸೇನೆ ಹೋರಾಟದ ಬಗ್ಗೆ ವಿವರ ನೀಡುವ ನಾರ್ಥರ್ನ್ ಒಕ್ಕೂಟದ ಟ್ವಿಟ್ಟರ್ ಖಾತೆ, ಇಂದು ಮುಂಜಾನೆ, ನಮ್ಮ ಹೋರಾಟಕ್ಕೆ ತಜಾಕಿಸ್ತಾನ್ ಹೆಲಿಕಾಪ್ಟರ್ ಗಳಿಂದ ಮೊದಲ ಬೆಂಬಲ ಸಿಕ್ಕಿದೆ. ಸಾಕಷ್ಟು ಸಲಕರಣೆಗಳು, ಬಂದೂಕುಗಳು, ಸಂಪೂರ್ಣ ಮದ್ದುಗುಂಡುಗಳು ಮತ್ತು ಆಹಾರಗಳನ್ನು ಆಮದು ಮಾಡಿಕೊಂಡಿವೆ. ಪ್ರತಿರೋಧದ ಮನೋಬಲ ಹೆಚ್ಚಾಗಿದೆ. ಆರಂಭದಿಂದಲೂ ನಮ್ಮ ನೆರೆಹೊರೆಯವರು ನೀಡಿದ ಎಲ್ಲಾ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದೆ.
ಈಗ ಬಂದಿರುವ ಮಾಹಿತಿಗಳ ಪ್ರಕಾರ ಬಲ್ಘಾನ್‍ನಲ್ಲಿ 300 ತಾಲಿಬಾನಿಗಳನ್ನು ಉತ್ತರ ಸೇನೆ ಹತ್ಯೆ ಮಾಡಿದೆ. ಫುಜ್ ಏರಿಯಾದಲ್ಲಿ 50ಕ್ಕೂ ಹೆಚ್ಚು ತಾಲಿಬಾನಿಗಳ ಹತ್ಯೆ ಮಾಡಿದ್ದರೆ ಬಾನು ಜಿಲ್ಲೆಯಲ್ಲಿ ತಾಲಿಬಾನ್ ಮುಖ್ಯಸ್ಥನನ್ನೇ ನಿರ್ನಾಮ ಮಾಡಿದೆ ಎಂದು ವರದಿಯಾಗಿದೆ.
ನಾರ್ಥರ್ನ್ ಅಲಯನ್ಸ್‌ ತಾಲಿಬಾನಿ ಉಗ್ರರ ಮೇಲೆ ಗುಂಡಿನ ಮಳೆ ಸುರಿಸುತ್ತಿರುವ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.ಈ ಹಿಂದೆಯೂ ತಾಲಿಬಾನ್‌ ಅಫಘಾನಿಸ್ತಾನದಲ್ಲಿ ಅಧಿಕಾರ ನಡೆಸಿದಾಗ ಪಂಜಶೀರ್‌ ಪ್ರಾಂತ ತಾಲಿಬಾನ್‌ ಕೈವಶವಾಗಿರಲಿಲ್ಲ.ಈಗಲೂ ತಾಲಿಬಾನಿಗಳಿಗೆ ಅಲ್ಲಿಂದಲೇ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ.

ಪ್ರಮುಖ ಸುದ್ದಿ :-   ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement