ಭಾನ್ಕುಳಿ ಗೋಸ್ವರ್ಗ ಆವಾರದಲ್ಲಿ ಹಸಿರು ಸ್ವರ್ಗಕ್ಕೆ ಚಾಲನೆ 

ಸಿದ್ದಾಪುರ: ತಾಲೂಕಿನ ಭಾನ್ಕುಳಿಯಲ್ಲಿ ದೇಶೀ ಗೋವುಗಳ ಸಂರಕ್ಷಣೆಗಾಗಿ ಗೋಸ್ವರ್ಗದ ಆವಾರದಲ್ಲಿ ವೃಕ್ಷ ಸಂವರ್ಧನೆಯ ಪವಿತ್ರ ಕಾರ್ಯಕ್ಕೆ ಮುಂದಾಗಿ ಹಸಿರು ಸ್ವರ್ಗ ನಿರ್ಮಾಣಕ್ಕೆ ತೊಡಗಿಕೊಂಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಅವರು ಗುರುವಾರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗ ಪ್ರದೇಶದಲ್ಲಿ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ(ರಿ) ಮತ್ತು ದಿನೇಶ ಶಾ ಫೌಂಡೇಶನ್ ಮುಂಬಯಿ ಜಂಟಿ ಸಹಭಾಗಿತ್ವದಲ್ಲಿ ಹವ್ಯಕ ಮಹಾಮಂಡಲದ ಸಹಕಾರದೊಂದಿಗೆ ವನಜೀವನ ಯಜ್ಞ ಯೋಜನೆಯ ಅಡಿಯಲ್ಲಿ ಗೋಸ್ವರ್ಗದ ಸುತ್ತ ಮುತ್ತ ಸಾವಿರಾರು ಗಿಡಗಳನ್ನು ನೆಟ್ಟು ಹಸಿರಿನ ಸುಂದರ ಪರಿಸರ ನಿರ್ಮಿಸುವ ವಿಶಿಷ್ಠ ಕಾರ್ಯಕ್ರಮ ಹಸಿರು ಸ್ವರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು.
. ಹಸಿರು ಸ್ವರ್ಗ ನಿರ್ಮಾಣಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ಅಪರೂಪದ ಗಿಡಗಳನ್ನು ತಂದು ಬೆಳೆಸಲು ಮುಂದಾಗಿದ್ದು ಭವಿಷ್ಯದಲ್ಲಿ ಈ ಪ್ರದೇಶವು ಗಮನಸೆಳೆಯುವ ಹಸಿರಿನ ತಾಣವಾಗಿ ಮಾರ್ಪಡಲಿದೆ. ಅರಣ್ಯ, ಜೀವವೈವಿಧ್ಯ, ದೇಶೀ ಜಾನುವಾರು, ಕೆರೆಗಳ ರಕ್ಷಣೆಯ ಜೊತೆ ಪ್ಲಾಸ್ಟಿಕ್ ಹಾಗೂ ಹಾನಿಕಾರಕ ಕೀಟನಾಶಕ ತಡೆಗೆ ಎಲ್ಲರೂ ಪ್ರಯತ್ನಿಸಬೇಕು. ಮಲೆನಾಡುಗಿಡ್ಡ, ಅಮೃತಮಹಲ್‌ನಂತಹ ದೇಶೀ ಗೋತಳಿಗಳು ವರ್ಷದಿಂದ ವರ್ಷಕ್ಕೆ ನಶಿಸುತ್ತಿದ್ದು ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ಕಡೂರು, ಅಜ್ಜಂಪುರ, ತಿಪಟೂರಿನಂತಹ ಪ್ರದೇಶಗಳಲ್ಲಿ ಸಾವಿರಾರು ಎಕರೆಗಳಷ್ಟು ಗೋಮಾಳಗಳು ವಿವಿಧ ಉದ್ದೇಶಗಳಿಗೆ ಬಳಕೆಯಾಗಿ ಕಣ್ಮರೆಯಾಗುತ್ತಿವೆ. ಯಾವುದೇ ಪ್ರದೇಶದಲ್ಲಿ ಈ ರೀತಿ ಆಗುವುದನ್ನು ತಡೆಯಬೇಕು. ಮಲೆನಾಡು ಭಾಗದ ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ಸಾವಯವ ಕೃಷಿಗೆ ಒತ್ತು ನೀಡುವ ಜೊತೆ ಪ್ರಕೃತಿಯ ಆರಾಧನೆಗೆ ತೊಡಗಿಕೊಳ್ಳುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ಮಾತನಾಡಿ, ಪಶ್ಚಿಮಘಟ್ಟವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ತಾಲೂಕಿನ ಕತ್ತಲೆಕಾನಿನ ಕಾನಗೇರು ಪ್ರಪಂಚದಲ್ಲಿಯೇ ಅಪರೂಪದ ತಳಿಯೆನಿಸಿದೆ. ತಾಲೂಕಿನ ೫೮೩ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ಮುಂದಾಗಿದ್ದು ೨೫೦ ಹೆಕ್ಟೇರ್ ಪ್ರದೇಶದಲ್ಲಿ ಸಾರ್ವಜನಿಕರ ಸಹಯೋಗದೊಂದಿಗೆ ಅರಣ್ಯಾಭಿವೃದ್ಧಿಗೆ ಮುಂದಾಗಿದ್ದೇವೆ. ಮಾವಿನಗುಂಡಿಯಲ್ಲಿನ ಸತ್ಯಾಗ್ರಹ ಸ್ಮಾರಕ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಗೋಸ್ವರ್ಗದಲ್ಲಿ ನಿರ್ಮಿಸುತ್ತಿರುವ ಹಸಿರು ಸ್ವರ್ಗಕ್ಕೆ ಅರಣ್ಯ ಇಲಾಖೆಯಿಂದ ಅಗತ್ಯ ನೆರವು ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಉಪಸ್ಥಿತರಿದ್ದ ಸಾಗರ ಹವ್ಯಕ ಮಂಡಲ ಅಧ್ಯಕ್ಷ ಮುರಳಿ ಗೀಜಗಾರು ಮಾತನಾಡಿದರು. ಬೇಡ್ಕಣಿ ಪಿಡಿಒ ಮಂಜುನಾಥ ಕೆ.ಪಿ.ಉಪಸ್ಥಿತರಿದ್ದರು.
ಹವ್ಯಕ ಮಹಾಮಂಡಲ ಹಾಗೂ ಗೋಸ್ವರ್ಗ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಮಾನ್ಯ ಕೃಷಿಕರಾಗಿ ಗೋಸ್ವರ್ಗಕ್ಕೆ ೧೧ ಲಕ್ಷ ರೂ.ಗಳು ಹಾಗೂ ಗೋಕರ್ಣ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಲಯಕ್ಕೆ ೧೦ ಲಕ್ಷ ರೂ. ದೇಣಿಗೆ ನೀಡಿದ ಹರೀಶೆ ವಲಯದ ಚಂದ್ರಕಾಂತ ರಾಮಕೃಷ್ಣ ಹೆಗಡೆ ಹರೀಶೆ ಅವರನ್ನು ಗೌರವಿಸಲಾಯಿತು.
ಪರಿಸರ ಕಾರ್ಯಕರ್ತರಾದ ಆನೆಗೊಳಿ ಸುಬ್ಬರಾವ್, ರಜನೀಶ ಹಕ್ರೆ, ಭಾನ್ಕುಳಿ ಮಠದ ಎಂ.ಎಂ.ಹೆಗಡೆ ಮಗೇಗಾರ, ಶ್ರೀನಾಥ ಸಾರಂಗ, ಮಾತೃಮಂಡಲದ ವೀಣಾ ಭಟ್ಟ ಶಿರಸಿ ಮುಂತಾದವರು ಪಾಲ್ಗೊಂಡಿದ್ದರು.
ದೀಪಾ ಭಟ್ಟ ಪರಿಸರ ಪ್ರಾರ್ಥನಾಗೀತೆ ಹಾಡಿದರು. ಕಾಮದುಘಾ ಟ್ರಸ್ಟಿನ ಅಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ ಸ್ವಾಗತಿಸಿದರು. ಎಂ.ಜಿ.ರಾಮಚಂದ್ರ ಮರ್ಡುಮನೆ ಪ್ರಾಸ್ತಾವಿಕ ಮಾತನಾಡಿದರು. ಎಂ.ವಿ.ಹೆಗಡೆ ಮುತ್ತಿಗೆ ನಿರ್ವಹಿಸಿದರು. ಜಯರಾಮ ಭಟ್ಟ ಗುಂಜಗೋಡ ವಂದಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement