ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರಿಗೆ ಸಿಕ್ಕ ಸುಳಿವು..?

ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರಿನ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೊಲೀಸರಿಗೆ  ಸುಳಿವು ಸಿಕ್ಕಿದೆ ಎನ್ನಲಾಗಿದೆ. ವಿದ್ಯಾರ್ಥಿನಿ ಮೇಲೆ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಕೇರಳ ಮೂಲದ ಮೂವರು ಹಾಗೂ ತಮಿಳುನಾಡಿನ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಘಟನೆ ಬಳಿಕ ಈ ನಾಲ್ವರು ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದು, ಬೆಂಗಳೂರು ಮತ್ತು ಮೈಸೂರಿನ ಎಂಟು ಹಿರಿಯ ಅಧಿಕಾರಿಗಳ ನೇತೃತ್ವದ ಜಂಟಿ ತಂಡ ಕೇರಳ ಮತ್ತು ತಮಿಳುನಾಡಿಗೆ ತೆರಳಿವೆ ಎನ್ನಲಾಗಿದೆ.
ಮಂಗಳವಾರ ಸಂಜೆ ಚಾಮುಂಡಿ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಪಾನಮತ್ತರಾಗಿದ್ದ ಈ ವಿದ್ಯಾರ್ಥಿಗಳು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ. ಮೊದಲು ಬಿಯರ್ ಬಾಟಲಿನಿಂದ ವಿದ್ಯಾರ್ಥಿನಿಯ ಸಹಪಾಠಿ ಮೇಲೆ ಹಲ್ಲೆ ನಡೆಸಿ ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡ ಕಾಮುಕರು:
ಓರ್ವ ವಿದ್ಯಾರ್ಥಿ ಈ ಘಟನೆಯನ್ನು ಸಂಪೂರ್ಣವಾಗಿ ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ನಿಮ್ಮ ತಂದೆತಾಯಿಗಳ ಬಳಿ ಮಾತನಾಡಿ ನಮಗೆ ಮೂರು ಲಕ್ಷ ಹಣ ನೀಡದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ವಿದ್ಯಾರ್ಥಿನಿಯ ಸಹಪಾಠಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ನಂತರ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಈ ನಾಲ್ವರು ಮೈಸೂರಿನಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದು ಮಹತ್ವದ ಅಂಶ ಪೊಲೀಸರಿಗೆ ಗೊತ್ತಾಗಿದೆ ಎಂದು ಹೇಳಲಾಗಿದೆ. ಘಟನೆ ವೇಳೆ ವಿದ್ಯಾರ್ಥಿನಿ ಜೊತೆಗಿದ್ದ ಸ್ನೇಹಿತ ನೀಡಿದ ಸುಳಿವಿನಿಂದ ಪ್ರಕರಣದಲ್ಲಿ ಪೊಲೀಸರಿಗೆ ಬಲವಾದ ಸುಳಿವು ಸಿಕ್ಕಿದೆ ಎಂದು ತಿಳಿದುಬಂದಿದೆ. ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಈ ನಾಲ್ವರು ವಿದ್ಯಾರ್ಥಿಗಳು ಮೈಸೂರಿನ ಕಾಲೇಜೊಂದರಲ್ಲಿ ಬುಧವಾರ ಇದ್ದ ಎಂಜಿನಿಯರಿಂಗ್ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ. ಇದು ಪೊಲೀಸರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಬೆಂಗಳೂರು ಮತ್ತು ಮೈಸೂರಿನ 8 ಅಧಿಕಾರಿಗಳ ತಂಡ ಕೇರಳ ಹಾಗೂ ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೂ ತೆರಳಿ ಶಂಕಿತರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ತಲೆಮರೆಸಿಕೊಂಡಿರುವವರ ಶೋಧಕ್ಕೆ ಬಲೆ ಬೀಸಲಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement