ಕಾಬೂಲ್: ತಾಲಿಬಾನ್ ಉಗ್ರರಿಗೆ ಹೆದರಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಶೀಘ್ರದಲ್ಲೇ ದೇಶಕ್ಕೆ ಮರಳಿ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ರಚನೆಯಾಗಲಿರುವ ಹೊಸ ತಾಲಿಬಾನ್ ಸರ್ಕಾರಕ್ಕೂ ಅವರು ಸೇರಬಹುದು ಎಂದು ಹೇಳಲಾಗಿದೆ.
ತಾಲಿಬಾನ್ ಸರ್ಕಾರದ ಭಾಗವಾಗಿ ಅಶ್ರಫ್ ಘನಿ ಇರಲಿದ್ದಾರೆ ಎಂಬ ಸುದ್ದಿಯೇ ಈಗ ಕುತೂಹಲಕ್ಕೆ ಕಾರಣವಾಗಿದ್ದು, ಇದಕ್ಕೆ ಪರ ಮತ್ತು ವಿರೋಧಗಳು ವ್ಯಕ್ತವಾಗುತ್ತಿದೆ. ಆಗಸ್ಟ್ ೧೫ ರಂದು ರಾಜಧಾನಿ ಕಾಬೂಲ್ ಪ್ರವೇಶಿಸುವ ಮೂಲಕ ತಾಲಿಬಾನ್ ಇಡೀ ಆಫ್ಘನ್ ಮೇಲೆ ಹಿಡಿತ ಸಾಧಿಸಿದ್ದು, ಅದರ ಬೆನ್ನಲ್ಲೇ ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರ ಪತನವಾಗಿತ್ತು. ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಹಿರಿಯ ಅಧಿಕಾರಿಗಳು ಶಾಂತಿಯುತವಾಗಿ ಅಧಿಕಾರವನ್ನು ವರ್ಗಾಯಿಸಲು ಒಪ್ಪಿದ್ದರು. ಈಗ ಅಫ್ಘಾನಿಸ್ತಾನದ ಬಹುತೇಕ ಭಾಗ ತಾಲಿಬಾನ್ ಹಿಡಿತದಲ್ಲಿದ್ದು, ಅವರೇ ಸರ್ಕಾರ ರಚಿಸಲು ಸಿದ್ಧವಾಗಿದ್ದಾರೆ.
ವಿಷಮ ಪರಿಸ್ಥಿತಿಯಲ್ಲಿ ದೇಶವನ್ನೇ ತೊರೆದು ಹೋದ ಅಧ್ಯಕ್ಷ ಘನಿ ಮೇಲೆ ಸಹಜವಾಗಿ ಅನೇಕ ರಾಜಕಾರಣಿಗಳು ಮತ್ತು ಸಾಮಾನ್ಯ ಜನರು ಕೋಪಗೊಂಡಿದ್ದಾರೆ. ಕಷ್ಟದ ಸಮಯದಲ್ಲಿ ದೇಶವನ್ನು ಬೆಂಬಲಿಸುವ ಬದಲು ಅವರು ಇಲ್ಲಿಂದ ಓಡಿಹೋದರೆಂದು ಟೀಕಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ