58 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ಇನ್ನೂ 58 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಮುಂದಿನ ವರ್ಷ ಆಗಸ್ಟ್​ 23ರ ಒಳಗೆ 75 ಹೊಸ ರೈಲುಗಳನ್ನು ಓಡಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 75 ಹೊಸ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ 75ನೇ ವರ್ಷದಲ್ಲಿ ಪ್ರತಿ ವಾರಕ್ಕೊಂದರಂತೆ 75 ವಾರಗಳಲ್ಲಿ ಇಡೀ ದೇಶವನ್ನು ಸಂಪರ್ಕಿಸುವ ಮೂಲಕ ‘ಆಜಾದಿ ಕಾ ಅಮೃತ್ ಮಹೋತ್ಸವ್’ವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದ್ದರು. ಅಲ್ಲದೆ 2024ರ ಹೊತ್ತಿಗೆ ಒಟ್ಟು 102 ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಈ ರೈಲುಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಚೆನ್ನೈನ ಮಾಡರ್ನ್ ಕೋಚ್ ಫ್ಯಾಕ್ಟರಿ, ರಾಯ್​ಬರೇಲಿ ಮತ್ತು ಕಪುರ್ತಲಾದ ರೈಲ್ ಕೋಚ್ ಫ್ಯಾಕ್ಟರಿಗಳಲ್ಲಿ ನಿರ್ಮಿಸಲಾಗುವುದು. ಅಕ್ಟೋಬರ್ 20, 2021ಕ್ಕೆ ಈ ಟೆಂಡರ್​ ಅವಧಿ ಮುಗಿಯಲಿದೆ. ಟೆಂಡರ್​ಗಾಗಿ ಮಾಹಿತಿ ಪಡೆಯಲು ಸೆ.14 ಕೊನೆಯ ದಿನವಾಗಿದ್ದರೆ, ಸೆ.21ರಂದು ಟೆಂಡರ್​ಗೂ ಮೊದಲಿನ ಚರ್ಚೆಗಾಗಿ ಆಸಕ್ತರ ಸಭೆ ನಡೆಯಲಿದೆ.
58 ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲುಗಳ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಪರೀಕ್ಷೆ, ಸಂಯೋಜನೆ, ಎಲೆಕ್ಟ್ರಿಕಲ್ ಕೆಲಸಗಳಿಗಾಗಿ ಆಗಸ್ಟ್​ 28ರಂದು ಟೆಂಡರ್​ ಕರೆಯಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಭಾರತೀಯ ರೈಲ್ವೆಯು 44 ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲುಗಳ ನಿರ್ಮಾಣಕ್ಕಾಗಿ ಟೆಂಡರ್ ಕರೆದಿತ್ತು. ರೈಲು ನಿರ್ಮಾಣಕ್ಕೆ ಶೇ 75ರಷ್ಟು ಉತ್ಪನ್ನಗಳು ದೇಶೀಯವಾಗಿಯೇ ಉತ್ಪಾದನೆಯಾಗಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು.
ಹೊಸ ವಿನ್ಯಾಸದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮಾರ್ಚ್ 2022ರಂದು ಸಂಚಾರ ಆರಂಭಿಸಲಿದೆ. ಜೂನ್ 2022ರ ವೇಳೆಗೆ ವಾಣಿಜ್ಯ ಸಂಚಾರ ಆರಂಭವಾಗಬಹುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ರೈಲುಗಳಲ್ಲಿ ಎಲೆಕ್ಟ್ರಿಕಲ್, ವಾತಾವರಣ ನಿಯಂತ್ರಣ ಮತ್ತು ಇತರ ಸೌಲಭ್ಯಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಿಯಂತ್ರಿಸಲು ಅವಕಾಶವಿದೆ. ಈ ರೈಲುಗಳ ಸೀಟುಗಳಿಗೆ ಪುಶ್​ಬ್ಯಾಕ್ ಸೌಲಭ್ಯವೂ ಇರುತ್ತದೆ. ಮೊದಲ ಎರಡು ಕೋಚ್​ಗಳಲ್ಲಿ ಪ್ರಯಾಣದ ಅನುಭವದ ಸುಧಾರಣೆಗೆ ಹಲವು ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಫೆಬ್ರುವರಿ 15, 2019ರಂದು ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement