ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ, ಸಂಜನಾ ನಂತರ ಈಗ ಇನ್ನಷ್ಟು ಸೆಲಬ್ರಿಟಿಗಳ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬರುತ್ತಿದೆ. ಗೋವಿಂದಪುರ ಡ್ರಗ್ಸ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, . ಡ್ರಗ್ ಪೆಡ್ಲರ್ ಥಾಮಸ್ ಕುಲು ಜೊತೆ ಸಂಪರ್ಕ ಹೊಂದಿದ್ದ ಸೆಲಬ್ರಿಟಿಗಳು, ಉದ್ಯಮಿಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ರಾಜಾಜಿನಗರ, ಪದ್ಮನಾಭನಗರ ಮತ್ತು ಬೆನ್ಸನ್ ಟೌನ್ನಲ್ಲಿರುವ ಸೆಲಬ್ರಿಟಿ ಸೋನಿಯಾ ಅಗರವಾಲ್ , ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಅವರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕೈದಿಯಾಗಿರುವ ಥಾಮಸ್ ಕಲು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬನಶಂಕರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಭರತ್ ಅವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಆರ್ಗ್ಯಾನಿಕ್ ಉತ್ಪನ್ನಗಳ ಉದ್ಯಮ ಹಾಗೂ ಕಾಸ್ಮೆಟಿಕ್ ವಸ್ತುಗಳ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸೋನಿಯಾ ಅಗರವಾಲ್ ಮನೆಯಲ್ಲಿ 40 ಗ್ರಾಮ್ ಗಾಂಜಾ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.
ಹೆಚ್.ಆರ್.ಬಿ.ಆರ್ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಥಾಮಸ್ ಕಲು ಅವರನ್ನ ಇದೇ ಆಗಸ್ಟ್ 12ರಂದು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ, 1.50 ಲಕ್ಷ ರೂ ಮೌಲ್ಯದ 403 ಎಕ್ಸ್ಟೆಸಿ ಪಿಲ್ಸ್ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದರು. ಈತ ಈ ಎಕ್ಸ್ಟೆಸಿ ಮಾತ್ರೆಗಳನ್ನ ಕಾಲೇಜು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಕೊಡುತ್ತಿದ್ದ. 350 ರೂಪಾಯಿಗೆ ಎಕ್ಸ್ಟೆಸಿಯನ್ನ ಖರೀದಿಸಿ 3 ಸಾವಿರ ರೂಪಾಯಿಗೆ ಅದನ್ನ ಮಾರುತ್ತಿದ್ದ. ಸೆಲಬ್ರಿಟಿಗಳಿಗೆ ಅತಿ ದುಬಾರಿಯ ಕೊಕೇನ್ ಸಿಂಥೆಟಿಕ್ ಡ್ರಗ್ಸ್ ಕೊಡುತ್ತಿದ್ದ. ಒಂದು ಗ್ರಾಮ್ ಕೊಕೇನ್ ಅನ್ನು 15 ಸಾವಿರ ರೂಗೆ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.
ಬೇಕಂತಲೇ ಅರೆಸ್ಟ್ ಆಗಿದ್ದ ಕಲು
ಕಳೆದ ವರ್ಷ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬರುತ್ತಲೇ ಥಾಮಸ್ ಕಲು ಜಾಗೃತನಾಗಿದ್ದ. ತಾನು ಹೀಗೆ ಮುಂದುವರಿದರೆ ಸಿಸಿಬಿ ಪೊಲೀಸರ ಹದ್ದಿನ ಕಣ್ಣು ಬೀಳಬಹುದು ಎಂದು ಈತ ಕಳೆದ ವರ್ಷ ಬೇಕಂತಲೇ ಅರೆಸ್ಟ್ ಆಗಲು ಪ್ಲಾನ್ ಮಾಡಿದ್ದ. ಡ್ರಗ್ಸ್ ಸೇವನೆ ಮಾಡಿ, ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಾ ಕೆಆರ್ ಪುರಂ ಪೊಲೀಸರ ಮುಂದೆ ಗಲಾಟೆ ಮಾಡಿದ್ದ. ಡ್ರಗ್ ಕನ್ಸೂಮ್, ಟ್ರಾಫಿಕ್ ರೂಲ್ಸ್ ವಯಲೇಶನ್ ಹಾಗೂ ಎನ್ಡಿಎಂಎ ಕಾಯ್ದೆ ಅಡಿ ಪೊಲೀಸರು ಈತನನ್ನು ಬಂಧಿಸಿದ್ದರು. ಈತ ಎಣಿಕೆ ಮಾಡಿದಂತೆ ಸಿಸಿಬಿ ಪೊಲೀಸರು ಥಾಮಸ್ ಕಲು ಕಡೆ ಗಮನ ಹರಿಸಲಿಲ್ಲ ಎಂದು ನ್ಯೂಸ್ 18 ಕನ್ನಡ.ಕಾಮ್ ವರದಿ ಮಾಡಿದೆ.
ಇತ್ತೀಚೆಗೆ ಥಾಮಸ್ ಕಲು ಜೊತೆ ಹಲವು ಸೆಲಬ್ರಿಟಿಗಳ ಡ್ರಗ್ಸ್ ನಂಟು ಇರುವ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ, ಈತನ ಮನೆ ಮೇಲೆ ದಾಳಿ ನಡೆಸಿದಾಗ ಮಾದಕವಸ್ತುಗಳು ಸಿಕ್ಕಿದ್ದವು. ಈತನ ಮೊಬೈಲ್ ಪರಿಶೀಲಿಸಿದಾಗ ಸೆಲಬ್ರಿಟಿಗಳ ಸಂಪರ್ಕ ದೃಢಪಟ್ಟಿತ್ತು. ಆ ಆಧಾರದ ಮೇಲೆ ವಚನ್ ಚಿನ್ನಪ್ಪ, ಭರತ್ ಮತ್ತು ಸೋನಿಯಾ ಅಗರ್ವಾಲ್ ಅವರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸೋನಿಯಾ ಅಗರ್ವಾಲ್ ಮನೆಯಲ್ಲಿ ಇರಲಿಲ್ಲವಾದ್ದರಿಂದ ಅವರ ತಂದೆಯ ಉಪಸ್ಥಿತಿಯಲ್ಲಿ ಮನೆಯ ಬಾಗಿಲು ತೆರೆದು ಶೋಧಿಸಲಾಯಿತು. ಈ ವೇಳೆ 40 ಗ್ರಾಮ್ ಗಾಂಜಾ ಸಿಕ್ಕಿದೆ. ಸೋನಿಯಾ ಅವರನ್ನ ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ ಎಂದು ವರದಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ