ಆರ್​ಬಿಐ ನಿರ್ಬಂಧದ ಬ್ಯಾಂಕ್​ಗಳ ಠೇವಣಿದಾರರಿಗೆ 90 ದಿನದಲ್ಲಿ 5 ಲಕ್ಷ ರೂ. ವರೆಗೆ ಹಣ; ನ. 30ರಿಂದಲೇ ಜಾರಿ

ನವದೆಹಲಿ:ಪಿಎಂಸಿ ಬ್ಯಾಂಕ್ ಸೇರಿದಂತೆ ಒತ್ತಡದಲ್ಲಿದ್ದ ಬ್ಯಾಂಕ್​ಗಳ ಠೇವಣಿದಾರರಿಗೆ ನವೆಂಬರ್ 30ರಿಂದ 5 ಲಕ್ಷ ರೂಪಾಯಿ ತನಕ ದೊರೆಯಲಿದೆ. ಡಿಐಸಿಜಿಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರದಿಂದ ಅಧಿಸೂಚನೆ ಹೊರಬಿದ್ದ ಹಿನ್ನೆಲೆಯಲ್ಲಿ ಇದು ನವೆಂಬರ್ 30ರಿಂದ ಕಾರ್ಯರೂಪಕ್ಕೆ ಬರಲಿದೆ.
ಈ ತಿಂಗಳ ಆರಂಭದಲ್ಲಿ ಸಂಸತ್​ನಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ತಿದ್ದುಪಡಿ (ಡಿಐಸಿಜಿಸಿ) ಮಸೂದೆ, 2021ಕ್ಕೆ ಅನುಮೋದನೆ ನೀಡಲಾಗಿತ್ತು. ಅದರ ಪ್ರಕಾರವಾಗಿ, ಆರ್​ಬಿಐನಿಂದ ಯಾವ ಬ್ಯಾಂಕ್​ ಮೇಲೆ ನಿರ್ಬಂಧ ಹೇರಲಾಗುತ್ತದೆಯೋ ಆ ಬ್ಯಾಂಕಿನ ಠೇವಣಿದಾರರು 5 ಲಕ್ಷ ರೂಪಾಯಿಯೊಳಗಿನ ಮೊತ್ತವನ್ನು 90 ದಿನದೊಳಗೆ ಹಿಂಪಡೆಯುತ್ತಾರೆ. ಆ ಐದು ಲಕ್ಷ ರೂಪಾಯಿ ಮೊತ್ತವನ್ನು ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್​ (ಡಿಐಸಿಜಿಸಿ) ನೀಡುತ್ತದೆ.
ಕೇಂದ್ರ ಸರ್ಕಾರವು ಸೆಪ್ಟೆಂಬರ್ 1, 2021 ದಿನಾಂಕದಿಂದ ಕಾಯ್ದೆ ಜಾರಿಯಾಗಲಿದೆ ಎಂದು ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಆಗಸ್ಟ್ 27, 2021ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ನವೆಂಬರ್ 30ರಂದು 90 ದಿನದೊಳಗಾಗಿ ಠೇವಣಿದಾರರಿಗೆ 5 ಲಕ್ಷ ರೂಪಾಯಿ ತಮ್ಮ ಹಣ ವಾಪಸ್ ದೊರೆಯುತ್ತದೆ. ಮೊದಲ 45 ದಿನಗಳು ಒತ್ತಡದಲ್ಲಿ ಸಿಲುಕಿಕೊಂಡ ಬ್ಯಾಂಕ್​ಗಳಿಗೆ ಇರುತ್ತದೆ. ಖಾತೆಗಳ ಎಲ್ಲ ಮಾಹಿತಿಯನ್ನು ಕಲೆಹಾಕಿ, ಎಲ್ಲಿ ಕ್ಲೇಮ್ ಮಾಡಬೇಕು ಎಂಬ ವಿವರವನ್ನು ತಿಳಿಯಲಾಗುತ್ತದೆ. ಆ ನಂತರ ಇದನ್ನು ಇನ್ಷೂರೆನ್ಸ್ ಕಂಪೆನಿಗೆ ಕಳುಹಿಸಲಾಗುತ್ತದೆ. ಎಲ್ಲವನ್ನೂ ಪರಿಶೀಲನೆ ಮಾಡಿ, 90ನೇ ದಿನ ಹತ್ತಿರ ಬರುತ್ತಿದ್ದಂತೆ ಠೇವಣಿದಾರರಿಗೆ ಹಣ ದೊರೆಯುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆರ್​ಬಿಐನಿಂದ ನಿರ್ಬಂಧ ಹೇರಲಾದ 23 ಕೋ ಆಪರೇಟಿವ್ ಬ್ಯಾಂಕ್​ಗಳ ಠೇವಣಿದಾರರಿಗೆ ಈಗಿನ ನಡೆಯಿಂದ ಅನುಕೂಲ ಆಗಲಿದೆ. ಡಿಐಸಿಜಿಸಿ ಆರ್​ಬಿಐನ ಅಂಗಸಂಸ್ಥೆ. ಬ್ಯಾಂಕ್​ ಠೇವಣಿ ಮೇಲೆ ಇನ್ಷೂರೆನ್ಸ್ ಕವರ್ ಒದಗಿಸುತ್ತದೆ. ಸಂಕಷ್ಟಕ್ಕೆ ಸಿಲುಕಿಕೊಂಡ ಬ್ಯಾಂಕ್​ಗಳ ಠೇವಣಿದಾರರು ತಮ್ಮ ಇನ್ಷೂರೆನ್ಸ್ ಹಣ ಹಾಗೂ ಇತರ ಕ್ಲೇಮ್ ಪಡೆಯಲು ಎಂಟರಿಂದ ಹತ್ತು ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು.
ಕಳೆದ ವರ್ಷ ಸರ್ಕಾರದಿಂದ ಠೇವಣಿ ಮೇಲಿನ ಇನ್ಷೂರೆನ್ಸ್ ಮೊತ್ತವನ್ನು ಐದು ಪಟ್ಟು, ಅಂದರೆ ಐದು ಲಕ್ಷ ರೂಪಾಯಿಗೆ ಏರಿಸಲಾಯಿತು. ಫೆಬ್ರವರಿ 4, 2020ರಿಂದ ವಿಸ್ತರಣೆಯಾದ 5 ಲಕ್ಷ ರೂಪಾಯಿಯ ಇನ್ಷೂರೆನ್ಸ್ ಕವರ್ ಜಾರಿಗೆ ಬಂದಿದೆ. ಪ್ರತಿ ಬ್ಯಾಂಕ್ ಸಹ ಠೇವಣಿ ಮೊತ್ತದ ತಲಾ 100 ರೂಪಾಯಿಗೆ 10 ಪೈಸೆಯಂತೆ ಪ್ರೀಮಿಯಂ ಪಾವತಿ ಮಾಡಬೇಕು.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಶೇ.30ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ: ಬಿಎಚ್‌ಯು ಅಧ್ಯಯನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement