ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಮೇಲೆ ಚಿಕ್ಕಮಗಳೂರಿನಲ್ಲಿ ಹಲ್ಲೆ

ಚಿಕ್ಕಮಗಳೂರು: ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಅವರ ಮೇಲೆ ಸೋಮವಾರ ಪುಂಡರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಮಂಗಳವಾರ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.
ಗಿರೀಶ್ ತಮ್ಮ ಜಿಪ್ಸಿಯಲ್ಲಿ ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್​ನಿಂದ ಗೆಳೆಯರೊಂದಿಗೆ ಹಿಂದಿರುಗುತ್ತಿದ್ದಾಗ ಸಂತವೇರಿ ತಿರುವಿನ ಸಮೀಪ ನಿಂತಿದ್ದ ಕೆಲ ಯುವಕರು ವಾಹನದಲ್ಲಿದ್ದ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದರು. ಗಿರೀಶ್ ವಾಹನ ನಿಲ್ಲಿಸಿ, ಹೀಗೆ ಮಾತನಾಡಬಾರದು ಎಂದು ಬುದ್ಧಿ ಹೇಳಿದ್ದಾರೆ. ಸ್ಥಳಕ್ಕೆ ಗಿರೀಶ್ ಗೆಳೆಯರೊಬ್ಬರು ಬಂದಿದ್ದನ್ನು ಗಮನಿಸಿದ ಯುವಕರು ಸುಮ್ಮನಾದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ ಎಂದು ಟಿವಿ 9 ಕನ್ನಡ.ಕಾಮ್‌ ವರದಿ ಮಾಡಿದೆ.
ವರದಿ ಪ್ರಕಾರ,   ಕೆಲ  ಹೊತ್ತಿನ ನಂತರ ಬೈಕ್​ಗಳಲ್ಲಿ ಗಿರೀಶ್​ ಜಿಪ್ಸಿ ಬೆನ್ನಟ್ಟಿದ ದುಷ್ಟರು, ಕಂಬಿಹಳ್ಳಿ ಸಮೀಪ ಜೀಪ್​ ಅಡ್ಡಗಟ್ಟಿ ಅದರಲ್ಲಿದ್ದ ಗಿರೀಶ್ ಮತ್ತು ಕೀರ್ತಿ ಕುಮಾರ್​ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದರು. ಗಿರೀಶ್​ ಅವರಿಗೆ ಕೆನ್ನೆಗೆ ಪೆಟ್ಟು ಬಿದ್ದು ಗಾಯವಾಯಿತು.
ನಡುರಸ್ತೆಯಲ್ಲಿ ಹಲ್ಲೆ ನಡೆಸುತ್ತಿದ್ದುದನ್ನು ಗಮನಿಸಿದ ಕಂಬಿಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಗಿರೀಶ್ ಮತ್ತು ಗೆಳೆಯರನ್ನು ರಕ್ಷಿಸಿದರು. ಈ ವೇಳೆ ‘ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿ ದುಷ್ಕರ್ಮಿಗಳು ಅಲ್ಲಿಂದ ಹೋದರು ಎಂದು ಗಿರೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಚಿಕ್ಕಮಗಳೂರಿನ ಶೋಲಾ ಹುಲ್ಲುಗಾವಲು, ನೀರಿನ ಸೆಲೆಗಳನ್ನು ಉಳಿಸಲು ಅವಿರತ ಹೋರಾಡುತ್ತಿರುವ ಗಿರೀಶ್ ಅವರ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ಫಲಿತಾಂಶ : ಭವಿಷ್ಯ ನುಡಿದ ಶ್ರೀ ಲೋಕನಾಥ ಸ್ವಾಮೀಜಿ

ಪರಿಸರ ಸಂರಕ್ಷಣೆ ಚಳವಳಿಯಲ್ಲಿ ಸಕ್ರಿಯರಾಗಿರುವ ಗಿರೀಶ್ ಹಲವು ಸಂಸ್ಥೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ದಾರೆ. ಭದ್ರಾ ಅಭಯಾರಣ್ಯ ಹಾಗೂ ಚಿಕ್ಕಮಗಳೂರಿನ ಪರಿಸರ ಸಂರಕ್ಷಣೆಗಾಗಿ ಅವರು ನಡೆಸಿದ ಸುದೀರ್ಘ ಹೋರಾಟವನ್ನು ಗೌರವಿಸಿ ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.
ಸ್ಕಾಟ್ಲೆಂಡ್‌ನ ಪ್ರತಿಷ್ಠಿತ ದಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ‘ಪ್ರೊಟೆಕ್ಟ್ ದಿ ಟೈಗರ್’ ಪ್ರಶಸ್ತಿ ಅದರಲ್ಲಿ ಪ್ರಮುಖವಾದುದು. ಇದರ ಜೊತೆಗೆ ವೈಲ್ಡ್‌ಲೈಫ್ ಕನ್ಸರ್​ವೇಶನ್ ಸೊಸೈಟಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾರ್ಲ್ ಜೀಸ್ ವೈಲ್ಡ್ ಲೈಫ್ ಕನ್ಸರ್ವೇಶನ್ ಅವಾರ್ಡ್, ಟೈಗರ್ ಗೋಲ್ಡ್ ಸೇರಿದಂತೆ ಹತ್ತಾರು ಪುರಸ್ಕಾರಗಳು ಸಂದಿವೆ.
ಕುದುರೆಮುಖ- ಮುತ್ತೋಡಿ ಅಭಯಾರಣ್ಯಗಳ ಉಳಿವಿಗೆ ಗಿರೀಶ್ ನೀಡಿದ ಕೊಡುಗೆ ದೊಡ್ಡದು. 2001-02ರಲ್ಲಿ ಭದ್ರ ಅಭಯಾರಣ್ಯದಲ್ಲಿದ್ದ 450ಕ್ಕೂ ಹೆಚ್ಚು ಕುಟುಂಬಗಳ ಸ್ವಯಂ ಪ್ರೇರಿತ ಪುನರ್ವಸತಿ ವಿಚಾರದಲ್ಲಿ ಅವರು ವಹಿಸಿದ ಪಾತ್ರ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. 2001-02ರಲ್ಲಿ ಮುತ್ತೋಡಿ ವ್ಯಾಪ್ತಿಯ 13 ಹಳ್ಳಿಗಳ (ಮುತ್ತೋಡಿ, ಕೆಸವೆ, ಮಾಡ್ಲ, ದಬ್ಬಗಾರು, ಕರ್ವಾನಿ, ಹೆಬ್ಬೆ, ಕಂಚಿಗಾರು, ಹೆಗ್ಗಾರು, ಮತ್ವಾನಿ, ಹಿರೇಬೆಳ್ಳು, ಒಡ್ಡಿಹಟ್ಟಿ, ಪರದೇಶಪ್ಪನಮಠ, ಹಿಪ್ಲಾ) ಜನರಿಗೆ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಸಮೀಪ ಯೋಗ್ಯ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಇದು ನಮ್ಮ ದೇಶದ ಅತ್ಯುತ್ತಮ ಪುನರ್ವಸತಿ ಎಂದೇ ಪರಿಗಣಿತವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಂ ರಮೇಶ್ ಸಹ ಲಕ್ಕವಳ್ಳಿಗೆ ಭೇಟಿ ನೀಡಿ ಪುನರ್ವಸತಿ ಪರಿಶೀಲಿಸಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ಮೂರು ಪ್ರತಿಷ್ಠಿತ ಹೋಟೆಲ್​ಗಳಿಗೆ ಬಾಂಬ್​ ಬೆದರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement