ಬಸ್‌ನಲ್ಲಿ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ, ಪ್ರತಿಷ್ಠಿತ ಸಾರಿಗೆಗಳೂ ಆರಂಭ

ಹುಬ್ಬಳ್ಳಿ: ಏಪ್ರೀಲ್ 2021ರ ಕೊನೆಯ ವಾರದಿಂದ ಕೋವಿಡ್ 2ನೇಯ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಸರಕಾರವು ಸಂಪೂರ್ಣ ಲಾಕ್‌ಡೌನ್ ವಿಧಿಸಿದ್ದರಿಂದ ಸಾರಿಗೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
ಕೋವಿಡ್ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಸರಕಾರದ ಪರಿಷ್ಕೃತ ಆದೇಶದನ್ವಯ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಬಸ್ಸಿನ ಪೂರ್ಣ ಪ್ರಮಾಣದ ಆಸನಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ.
ಈ ಮೊದಲು ಹಂತ ಹಂತವಾಗಿ ಸರಕಾರದ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಸಾರಿಗೆಯನ್ನು ಪ್ರಾರಂಭಿಸಲು ಸರಕಾರವು ಉದ್ದೇಶಿಸಿ ಬಸ್ಸಿನ ಶೇ. 50 ಪ್ರಮಾಣದ ಆಸನಗಳ ಸಾಮರ್ಥ್ಯಕ್ಕೆ ಮಾತ್ರ ಪ್ರಯಾಣಿಸುವಂತೆ ನಿರ್ಬಂಧ ವಿಧಿಸಲಾಗಿತ್ತು. ವೇಗದೂತ ಮತ್ತು ಸಾಮಾನ್ಯ ಸಾರಿಗೆಗಳಿಗೆ ತಕ್ಕ ಮಟ್ಟಿಗೆ ಪ್ರಯಾಣಿಕರು ಪ್ರಯಾಣಿಸುತ್ತಿದ್ದರೂ ಸಹ, ದೂರದ ಮಾರ್ಗಗಳ ಪ್ರತಿಷ್ಠಿತ ಸಾರಿಗೆಗಳಿಗೆ ಪ್ರಯಾಣಿಕರ ಸಂಖ್ಯೆ ಅತೀ ವಿರಳ ಇದ್ದ ಕಾರಣ ಅದನ್ನು ಪ್ರಾರಂಭಿಸಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಷ್ಠಿತ ಸಾರಿಗೆಗಳನ್ನೂ ಪ್ರಾರಂಭಿಸುವಂತೆ ಸಾರ್ವಜನಿಕರಿಂದಲೂ ಬೇಡಿಕೆಗಳು ಬರುತ್ತಿವೆ.
ಈ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟ, ಬೆಳಗಾವಿ, ಮತ್ತು ಚಿಕ್ಕೋಡಿ ವಿಭಾಗಗಳ ವ್ಯಾಪ್ತಿಯ ಘಟಕಗಳಿಂದ ಕೆಲವು ಅಂತಾರಾಜ್ಯ ಸಾರಿಗೆಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಪ್ರತಿಷ್ಠಿತ ಸಾರಿಗೆಗಳನ್ನು ಪುನಃ ಪ್ರಾರಂಭಿಸಲಾಗಿದೆ. ಚಾಲನಾ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ ಧರಿಸಿ ಸುರಕ್ಷತಾ ಕ್ರಮಗಳೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಯಾಣಿಸಬೇಕು ಎಂದು ವಾಕರಾರಸಾ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣ : ಮಾಜಿ ಶಾಸಕ ಪ್ರೀತಂಗೌಡ ಆಪ್ತರನ್ನು ವಶಕ್ಕೆ ಪಡೆದ ಎಸ್ಐಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement