ತಮಿಳಿನಲ್ಲಿ ಮಂತ್ರ ಪಠನೆ: ಧಾರ್ಮಿಕ ಇಲಾಖೆ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

ಚೆನ್ನೈ: ತಮಿಳುನಾಡಿನ ಹಿಂದೂ ದೇವಾಲಯಗಳಲ್ಲಿ ಸಂಸ್ಕೃತ ಮಾತ್ರವಲ್ಲದೇ ತಮಿಳಿನಲ್ಲೂ ಪೂಜೆ ಮಾಡಲು ತಮಿಳುನಾಡು ಧಾರ್ಮಿಕ ಮತ್ತು ದತ್ತಿ ಇಲಾಖೆ ಒತ್ತಾಯಿಸುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಪರಿಗಣಿಸಲು ಶುಕ್ರವಾರ ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿದೆ.
2008ರಲ್ಲಿ ವಿ. ಎಸ್‌. ಶಿವಕುಮಾರ್‌ ವರ್ಸಸ್‌ ಎಂ ಪಿಚ್ಚೈ ಬತ್ತಾರ್‌ ಪ್ರಕರಣದಲ್ಲಿ ಈ ವಿಚಾರವನ್ನು ತೀರ್ಮಾನಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ. ಡಿ. ಆದಿಕೇಶವಲು ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ವಿ. ಎಸ್‌. ಶಿವಕುಮಾರ್‌ ಪ್ರಕರಣದ ತೀರ್ಪಿನಲ್ಲಿ ಆಗಮ ಶಾಸ್ತ್ರ ಅಥವಾ ಧರ್ಮ ಗ್ರಂಥಗಳಲ್ಲಿ ತಮಿಳಿನಲ್ಲಿ ಮಂತ್ರ ಪಠಿಸಬಾರದು ಎಂದು ಹೇಳಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಅರ್ಚನೆ ಮಾಡುವಾಗ ತಮಿಳು ಅಥವಾ ಸಂಸ್ಕೃತದಲ್ಲಿ ಮಂತ್ರ ಹೇಳಬೇಕೆಂದು ಕೇಳುವ ಆಯ್ಕೆ ಭಕ್ತರಿಗೆ ಬಿಟ್ಟದ್ದಾಗಿದೆ” ಎಂದೂ ಪೀಠ ಹೇಳಿದೆ ಎಂದು ಬಾರ್‌ ಎಂಡ್‌ ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ದೇವಾಲಯದಲ್ಲಿ ಸಂಸ್ಕೃತದಲ್ಲಿ ಮಂತ್ರ ಹೇಳುವುದರ ಜೊತೆಗೆ ಭಕ್ತರ ಸೂಚನೆಯಂತೆ ಮಂತ್ರವನ್ನು ತಮಿಳಿನಲ್ಲಿ ಹೇಳಬೇಕು ಎಂಬುದನ್ನು ವಿ. ಎಸ್‌. ಶಿವಕುಮಾರ್‌ ಪ್ರಕರಣದ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಅರ್ಜಿದಾರ ರಂಗರಾಜನ್‌ ನರಸಿಂಹನ್‌ ಅವರು “ಅನಾದಿ ಕಾಲದಿಂದಲೂ ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಅರ್ಚನೆ ಮಾಡಿಸುವುದು ವಾಡಿಕೆಯಾಗಿದೆ. ಆಗಮನ ಶಾಸ್ತ್ರದ ಪ್ರಕಾರ ಮಂತ್ರ ಹೇಳುವಾಗ ನಿರ್ದಿಷ್ಟ ವಿಧಾನ ಅನುಸರಿಸಬೇಕು. ಪರಿಚಿತವಿಲ್ಲದ ಭಾಷೆಯಲ್ಲಿ ಮಂತ್ರ ಹೇಳುವಂತೆ ದೇವಾಲಯಗಳನ್ನು ಒತ್ತಾಯಿಸುವ ಮೂಲಕ ತಮಿಳುನಾಡು ಸರ್ಕಾರ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ” ಎಂದು ವಾದಿಸಿದ್ದರು.
ಜಾತ್ಯತೀತವಾದ ದೇಶವಾಗಿರುವುದರಿಂದ ಧರ್ಮದ ವಿಚಾರದಲ್ಲಿ ಸರ್ಕಾರ ಅಥವಾ ಸರ್ಕಾರದ ವಿಚಾರದಲ್ಲಿ ಧರ್ಮ ಮಧ್ಯಪ್ರವೇಶಿಸುವಂತಿಲ್ಲ. ಪ್ರಾರ್ಥನಾ ಕೇಂದ್ರಗಳ ಕಾಯಿದೆಯ ಪ್ರಕಾರ ದೇವಸ್ಥಾನಗಳ ಧಾರ್ಮಿಕ ನೀತಿ-ನಿಯಮಗಳನ್ನು ಬದಲಿಸುವಂತಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಸರ್ಕಾರದ ನಿಲುವು ಕಾನೂನಿಗೆ ವಿರುದ್ಧವಾಗಿದೆ” ಎಂದರು.
ತಮ್ಮ ಇಷ್ಟದ ಭಾಷೆಯಲ್ಲಿ ಮಂತ್ರ ಹೇಳಲು ಭಕ್ತರು ಸ್ವತಂತ್ರರು” ಎಂದು ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಮೌಖಿಕವಾಗಿ ಹೇಳಿದರು.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement