ಇಂದಿನಿಂದ ರಾಜ್ಯದಲ್ಲಿ 6 ರಿಂದ 8ನೆ ತರಗತಿಗಳು ಆರಂಭ..ಹಾಜರಾತಿ ಕಡ್ಡಾಯವಲ್ಲ

ಬೆಂಗಳೂರು: ಕೊರೊನಾ ಸಂಕಷ್ಟ ಹಾಗೂ ಹಲವು ಸವಾಲುಗಳ ನಡುವೆ ಸೆ.6ರಿಂದ 6 ರಿಂದ 8ನೆ ತರಗತಿ ವರೆಗೆ ಶಾಲೆಗಳು ಆರಂಭವಾಗಲಿವೆ. ಕೋವಿಡ್-19 ಮಾರ್ಗಸೂಚಿಗಳ ಕಡ್ಡಾಯ ಪಾಲನೆಯೊಂದಿಗೆ ಸೋಮವಾರದಿಂದ ಎರಡನೆ ಹಂತದಲ್ಲಿ ಶಾಲೆಗಳು ಪ್ರಾರಂಭಗೊಳ್ಳಲಿದ್ದು, ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಿದ್ಧವಾಗಿವೆ.
18 ತಿಂಗಳಿನಿಂದ ಶಾಲೆಗಳು ಆರಂಭವಾಗಿರಲಿಲ್ಲ. 6 ರಿಂದ 8ನೆ ತರಗತಿವರೆಗಿನ ಶಾಲೆಗಳು ಆರಂಭವಾಗಲಿದ್ದು, ಬೆಳಗ್ಗೆ 10 ರಿಂದ 1.30ರ ವರೆಗೆ ಶಾಲೆಗಳು ನಡೆಯಲಿವೆ. ಕಳೆದ ಆಗಸ್ಟ್‌ 23ರಿಂದ 9 ರಿಂದ 12ನೆ ತರಗತಿ ವರೆಗೆ ಶಾಲೆಗಳು ಆರಂಭವಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಕೊರೊನಾ ಆತಂಕ ಇನ್ನೂ ದೂರವಾಗದ ಹಿನ್ನೆಲೆಯಲ್ಲಿ ಮಕ್ಕಳ ಹಾಜರಾತಿಯನ್ನು ಸರ್ಕಾರ ಕಡ್ಡಾಯಗೊಳಿಸಿಲ್ಲ. ಆನ್‍ಲೈನ್ ಹಾಗೂ ಆಫ್‍ಲೈನ್ ಎರಡೂ ತರಗತಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪೋಷಕರು ಇಷ್ಟವಿದ್ದರೆ ಮಕ್ಕಳನ್ನು ಶಾಲೆಗೆ ಭೌತಿಕ ತರಗತಿಗಳಿಗೆ ಕಳುಹಿಸಬಹುದು, ಇಲ್ಲದಿದ್ದರೆ ಆನ್‍ಲೈನ್ ಶಿಕ್ಷಣಕ್ಕೆ ಅನುವು ಮಾಡಿಕೊಡಬಹುದಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು ಮುಂತಾದವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ತಜ್ಞ ಬಿ.ಸಿ.ನಾಗೇಶ್ ಶಾಲೆಗಳ ಆರಂಭಕ್ಕೆ ಸಹಮತ ವ್ಯಕ್ತಪಡಿಸಿದ್ದರು. 6 ರಿಂದ 8ನೆ ತರಗತಿ ಶಾಲೆಗಳನ್ನು ಸೆ.6 ಸೋಮವಾರದಿಂದ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಶಾಲೆಗಳ ಪ್ರಾರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳಿಗೆ ಬರುವ ಮಕ್ಕಳು ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ತರಬೇಕು 6, 7 ಮತ್ತು 8ನೆ ತರಗತಿ ವಿದ್ಯಾರ್ಥಿಗಳ ಶಾಲೆಗಳು ಪ್ರಾರಂಭವಾಗಿ ಉತ್ತಮ ಪ್ರತಿಕ್ರಿಯೆ ಕಂಡುಬಂದರೆ 1 ರಿಂದ 5ನೆ ತರಗತಿಯ ಶಾಲೆಗಳನ್ನು ಕೂಡ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸುವ ಸಾಧ್ಯತೆ ಇದೆ. ಪ್ರತಿಯೊಂದು ಕೊಠಡಿಯಲ್ಲಿ ಕನಿಷ್ಠ 20 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ. ವಾರದಲ್ಲಿ ಕೇವಲ ಐದು ದಿನಗಳು ಮಾತ್ರ ಶಾಲೆಗಳು ನಡೆಯಲಿವೆ. ಶನಿವಾರ ಮತ್ತು ಭಾನುವಾರ ಎಲ್ಲ ಶಾಲೆಗಳನ್ನೂ ಸ್ಯಾನಿಟೈಜ್ ಮಾಡಿ ಶುಚಿಗೊಳಿಸಲು ಸೂಚನೆ ನೀಡಲಾಗಿದೆ.
ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಹೆಚ್ಚಿರುವ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಉಳಿದ ಜಿಲ್ಲೆಗಳಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲು ಶಾಲೆಗಳು ಸಿದ್ಧವಾಗಿವೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement