ಮೈಸೂರು ವಿವಿ ಘಟಿಕೋತ್ಸವ: ಉತ್ತರ ಕನ್ನಡ ಜಿಲ್ಲೆ ಶೀಗೆಹಳ್ಳಿ ವಿದ್ಯಾರ್ಥಿನಿ ಚೈತ್ರಾ ಹೆಗಡೆಗೆ 20 ಚಿನ್ನದ ಪದಕ..!

ಮೈಸೂರು: ಕರ್ನಾಟಕದ ಹೆಮ್ಮೆಯಾಗಿರುವ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವವನ್ನು ಪೂರೈಸಿ 101ನೇ ಘಟಿಕೋತ್ಸವವನ್ನು ಇಂದು (ಮಂಗಳವಾರ) ನಡೆಯಿತು.
ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಘಟಿಕೋತ್ಸವದಲ್ಲಿ ಪುರಸ್ಕರಿಸಲಾಯಿತು. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ನಾರಾಯಣ್ ಹೆಗಡೆ 20 ಚಿನ್ನದ ಪದಕ ಮತ್ತು ನಾಲ್ಕು ಬಹುಮಾನಗಳಿಗೆ ಭಾಜನರಾದರು.
ಮೈಸೂರು ವಿಶ್ವವಿದ್ಯಾಲಯ ದಲ್ಲಿ ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ವ್ಯಾಸಂಗ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮದ, ಬಡ ಕುಟುಂಬದ ವಿದ್ಯಾರ್ಥಿನಿ ಚೈತ್ರ ನಾರಾಯಣ ಹೆಗಡೆ ಅಪ್ರತಿಮ ಸಾಧನೆ ಮಾಡಿದ್ದು, ಒಟ್ಟು 20 ಚಿನ್ನದ ಪದಕ ಹಾಗೂ ನಾಲ್ಕು ದತ್ತಿ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.
ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿರುವ ಚೈತ್ರಾ ನಾರಾಯಣ ಹೆಗಡೆ ಅವರಿಗೆ ಮೈಸೂರು ವಿ.ವಿ ಯ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು.
ಆರ್ಗ್ಯಾನಿಕ್, ಇನ್ ಆರ್ಗ್ಯಾನಿಕ್ ಮತ್ತು ಫಿಜಿಕಲ್ ಕೆಮಿಸ್ಟ್ರಿಯಲ್ಲಿ ತಲಾ 3 ಪದಕಗಳನ್ನು ಪಡೆದಿರುವ ಚೈತ್ರಾ ಹೆಗಡೆ ಒಟ್ಟಾರೆ ಅತಿ ಹೆಚ್ಚು ಫಲಿತಾಂಶ ಪಡೆದು ಇನ್ನೂ 11 ಪದಗಳ‌ನ್ನು ಮುಡಿಗೇರಿಸಿಕೊಂಡಿದ್ದಾರೆ.
ಉತ್ತರಕನಡ ಜಿಲ್ಲೆಯ ಶಿರಸಿ ತಾಲ್ಲೂಕಿಗೆ 15 ಕಿ.ಮೀ ದೂರ ಶಿಗೆಳ್ಳಿ ಗ್ರಾಮದವರಾದ ಚೈತ್ರ ನಾರಾಯಣ ಹೆಗಡೆ ಮೂಲ ರೈತ ದಂಪತಿ ಮಗಳು. ತಂದೆ ನಾರಾಯಣ ಹೆಗಡೆ, ತಾಯಿ ಸುಮಂಗಲಾ ಹೆಗಡೆ.
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಚೈತನ್ಯ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಬಿಎಸ್ಸಿ ಪದವಿಗಾಗಿ ಮೈಸೂರಿನ ಯುವರಾಜ ಕಾಲೇಜು ಸೇರಿದರು. ಅಲ್ಲಿಯೂ ಉತ್ತಮ‌ ರ‍್ಯಾಂಕ್‌ ಪಡೆದು ಪದಕ ಪಡೆದಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿದರು. ಇದೀಗ ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉಳಿದಂತೆ ಕನ್ನಡ ವಿಭಾಗದಲ್ಲಿ ಟಿ.ಎಸ್. ಮಾದಲಾಂಬಿಕೆ 10 ಪದಕ, 4 ಪ್ರಶಸ್ತಿ ಗಳಿಸಿಕೊಂಡರು. ಎಂಎ ಸಂಸ್ಕೃತ ವಿಭಾಗದ ಸೀಮಾಗೆ 8 ಪದಕ, 2 ದತ್ತಿ ಪ್ರಶಸ್ತಿ, ಬಿಎ ಪದವಿಯ ಸಿಂಧೂ ನಾಗರಾಜ್​ 7 ಪದಕ, 7 ದತ್ತಿ ಪ್ರಶಸ್ತಿ, ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದ ಹಿಮಾಂಷಿ ಚೌಹಾಣ್‌ಗೆ 8 ಪದಕ, ಹಿಮಾಂಷಿ ಚೌಹಾಣ್‌ಗೆ 3 ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ಒಟ್ಟು 29,852 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗಿದೆ. ಅವರಲ್ಲಿ 20,118 (67.39%) ವಿದ್ಯಾರ್ಥಿನಿಯರು ಹಾಗೂ ಹಾಗೂ 9,734 (32.60%) ವಿದ್ಯಾರ್ಥಿಗಳು. ವಿವಿಧ ವಿಷಯಗಳಲ್ಲಿ 244 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ಪಡೆದವರಲ್ಲಿ, 98 (40.16%) ಮಹಿಳೆಯರು ಮತ್ತು 146 (59.83%) ಪುರುಷರು ಇದ್ದರು. ಒಟ್ಟಾರೆ 387 ಪದಕಗಳು ಹಾಗೂ 216 ಅಭ್ಯರ್ಥಿಗಳಿಗೆ 178 ದತ್ತಿ ಬಹುಮಾನಗಳನ್ನು ಪ್ರದಾನ ಮಾಡಲಾಯಿತು. ಅವರಲ್ಲಿ 172 ಮಹಿಳೆಯರು ಹಾಗೂ 44 ಪುರುಷ ಅಭ್ಯರ್ಥಿಗಳಿದ್ದರು. ಇದೇ ವೇಳೆ 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 22,465 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ನೀಡಲಾಯಿತು. ಈ ಪೈಕಿ 20,020 ಮಹಿಳೆಯರು, 9,588 ಪುರುಷ ಅಭ್ಯರ್ಥಿಗಳಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement