ಕಲಬುರಗಿ ಪಾಲಿಕೆ ಅಧಿಕಾರಕ್ಕೆ ಬಿಜೆಪಿ-ಕಾಂಗ್ರೆಸ್‌ ಕಸರತ್ತು: ಎಚ್‌ಡಿಕೆ ಜೊತೆ ಬೊಮ್ಮಾಯಿ, ದೇವೇಗೌಡರ ಜೊತೆ ಖರ್ಗೆ ಮಾತುಕತೆ- ಆದ್ರೆ ಗುಟ್ಟುಬಿಟ್ಟುಕೊಡದ ಜೆಡಿಎಸ್‌

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ಒಟ್ಟು 55 ಸದಸ್ಯರ ಬಲ ಹೊಂದಿದ್ದು, ಆದರೆ ಪಾಲಿಕೆ ಚುನಾವಣಾ ಫಲಿತಾಂಶದಲ್ಲಿ ಹಾಂಗ್ರೆಸ್‌ ಹಾಗೂ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹೀಗಾಗಿ ಕೇಔಲ ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೂ ಜೆಡಿಎಸ್‌ಗೆ ಈಗ ಎಲ್ಲಿಲ್ಲದ ಮಹತ್ವ ಬಂದಿದೆ.
ಕಾಂಗ್ರೆಸ್ 27 ವಾರ್ಡ್‌ಗಳಲ್ಲಿ, ಬಿಜೆಪಿ 23 ಮತ್ತು ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಗೆದ್ದರೆ ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ಜೆಡಿಎಸ್ ನಿರ್ಧಾರವೇ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಯಲು ಅಂತಿಮವಾಗಿರುವುದರಿಂದ ಅದರ ಬೆಂಬಲ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಶತಾಯ-ಗತಾಯ ಪ್ರಯತ್ನ ನಡೆಸುತ್ತಿವೆ. ಆದರ ಈ ಸಂಬಂಧ ಜೆಡಿಎಸ್ ಇನ್ನೂ ಯಾರಿಗೆ ಬೆಂಬಲ ಎಂದು ಗುಟ್ಟು ಬಿಟ್ಟುಕೊಟ್ಟಿಲ್ಲ.
ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಯ್ಕೆಯಾದ ನಾಲ್ವರು ಜೆಡಿಎಸ್ ವಾರ್ಡ್‌ ಸದಸ್ಯರು ಪಕ್ಷದ ವರಿಷ್ಠರಾದ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲು 64 ಮತದಾರರನ್ನು ಹೊಂದಿದೆ, ಅದರಲ್ಲಿ 55 ಚುನಾಯಿತ ಪಾಲಿಕೆ ಸದಸ್ಯರಾದರೆ, ಉಳಿದವರು ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು. ಬಿಜೆಪಿ 23 ಪಾಲಿಕೆ ಸದಸ್ಯರು, ಒಬ್ಬ ಸ್ವತಂತ್ರ ಓರ್ವ ಸಂಸದ, ಶಾಸಕ ಮತ್ತು ವಿದಾನ ಪರಿಷತ್‌ ಸದಸ್ಯರು ಸೇರಿ ಬಿಜೆಪಿ 29 ಮತಗಳನ್ನು ಹೊಂದಿದೆ. ಅಂತೆಯೇ, ಕಾಂಗ್ರೆಸ್ 27 ಪಾಲಿಕೆ ಸದಸ್ಯರು, ಒಬ್ಬ ಸಂಸದ, ಒಬ್ಬ ಶಾಸಕ ಮತ್ತು ಒಬ್ಬವಿಧಾನ ಪರಿಷತ್‌ ಸದಸ್ಯ ಸೇರಿದಂತೆ 30 ಮತದಾರರನ್ನು ಹೊಂದಿದೆ. ಆದರೆ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಇದು ಸಾಕಾಗುವುದಿಲ್ಲ. ಇಕ್ಕೆ ಮತ್ತೊಬ್ಬರ ಬೆಂಬಲ ಬೇಕೇ ಬೇಕು. ಆದರೆ ಪಕ್ಷೇತರರು ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಹೀಗಾಗಿ ಯಾರೇ ಆದರೂ ಜೆಡಿಎಸ್‌ ಬೆಂಬಲ ಪಡೆಯುವುದು ಅನಿವಾರ್ಯವಾಗುತ್ತದೆ.
ಬೆಂಬಲ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ಕಸರತ್ತು..:
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಲಬುರಗಿ ನಗರ ಪಾಲಿಕೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಲು ಜೆಡಿಎಸ್ ಆಸಕ್ತಿ ತೋರಿಸಿದೆ ಎಂದು ಹೇಳಿದ್ದಾರೆ. “ಈ ಸಂಬಂಧ ನಾನು ಜೆಡಿಎಸ್ ನಾಯಕರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಕೂಡ ಸ್ಪಂದಿದ್ದಾರೆ. ಇದು ಒಳ್ಳೆಯ ಸಂಕೇತ ‘ಎಂದು ಅವರು ಹೇಳಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಮೈತ್ರಿ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ವರಿಷ್ಠ ದೇವೇಗೌಡ ಅವರ ಜೊತೆ ಮಾತನಾಡಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಸ್ಥಾನಗಳು ಬರುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ
ಪಡೆಯದೇ ತೀರ್ಮಾನತೆಗೆದುಕೊಳ್ಳುವುದು ಬೇಡ ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ. ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿರಬಹುದು. ನನ್ನ ಜೊತೆ ಬಿಜೆಪಿಯ ನಾಯಕರು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ದೇವೇಗೌಡರೊಂದಿಗೆ ಮಾತನಾಡಿದ್ದಾರೆ. ಕಲಬುರಗಿಯಲ್ಲಿ ಜಾತ್ಯತೀತ ಪಕ್ಷಗಳು ಕೈಜೋಡಿಸಿ ಆಡಳಿತ ನಡೆಸುತ್ತವೆ. ನಾವು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಪ್ರಜಾಪ್ರಭುತ್ವದಲ್ಲಿ, ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷವು ಅಧಿಕಾರಕ್ಕೆ ಬರುವುದು ನ್ಯಾಯಯುತ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಆದರೆ, ಜೆಡಿಎಸ್ ಮಾತ್ರ ತನ್ನ ನಿಲುವನ್ನು ಇನ್ನೂ ಬಹಿರಂಗಪಡಿಸಿಲ್ಲ. ಮೈತ್ರಿ ಬಗ್ಗೆ ಪಕ್ಷದ ನಾಯಕತ್ವ ನಿರ್ಧರಿಸುತ್ತದೆ, ಕುಮಾರಸ್ವಾಮಿ ಏನೇ ನಿರ್ಧಾರ ಕೈಗೊಂಡರು ನಾವು ಅವರೊಂದಿಗೆ ಇರುತ್ತೇವೆ ಎಂದು ಜೆಡಿಎಸ್ ಹಿರಿಯ ನಾಯಕ ಬಂಡೆಪ್ಪ ಕಾಶಂಪುರ್ ತಿಳಿಸಿದ್ದು ಬಿಟ್ಟರೆ ಜೆಡಿಎಸ್‌ ತಾನು ಯಾರಿಗೆ ಬೆಂಬಲಿಸುತ್ತೇನೆ ಎಂಬ ಬಗ್ಗೆ ರಹಸ್ಯ ಬಿಚ್ಚಿಟ್ಟಿಲ್ಲ.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement