ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ಬ್ರಿಕ್ಸ್ ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‍ಪಿಂಗ್ ಕೂಡ ಭಾಗಿ

ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ನಾಳೆ (ಸೆಪ್ಟೆಂಬರ್‌ 9ರಂದು) ನಡೆಯಲಿರುವ 13ನೆ ಬ್ರಿಕ್ಸ್ ಶೃಂಗಸಭೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಭಾಗವಹಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ತಿಳಿಸಿದ್ದಾರೆ.
ಗುರುವಾರ 13ನೆ ಬ್ರಿಕ್ಸ್ ಶೃಂಗಸಭೆಯು ವರ್ಚುವಲ್‌ ಮೂಲಕ ನಡೆಯಲಿದ್ದು, ಭಾರತ, ರಷ್ಯಾ, ಬ್ರೇಜಿಲ್‌, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ನಾಯಕರ ವರ್ಚುವಲ್ ಸಭೆಗೆ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ನವದೆಹಲಿಯಲ್ಲಿ ತಿಳಿಸಿದೆ.
ಈ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮ್‌ಪೋಸಾ ಮತ್ತು ಬ್ರೆಜಿಲ್‍ನ ಜೈರ್ ಬೋಲ್ಸೊನಾರೊ ಕೂಡ ಭಾಗವಹಿಸಲಿದ್ದಾರೆ. ಶೃಂಗಸಭೆಯ ಮುಖ್ಯ ವಿಷಯವಾಗಿ ಭಾರತವು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ, ಭಯೋತ್ಪಾದನೆ ತಡೆ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‍ಡಿಜಿ) ಸಾಧಿಸಲು ಮತ್ತು ಜನರ ವಿನಿಮಯಕ್ಕೆ ಡಿಜಿಟಲ್ ಮತ್ತು ತಾಂತ್ರಿಕ ಸಾಧನ ಹೀಗೆ ನಾಲ್ಕು ಆದ್ಯತೆಯ ಕ್ಷೇತ್ರಗಳನ್ನು ರೂಪಿಸಲಾಗಿದೆ.
ಜೊತೆಗೆ ನಾಯಕರು ಕೋವಿಡ್‌ ಸಾಂಕ್ರಾಮಿಕದ ಪರಿಣಾಮ ಮತ್ತು ಇತರ ಪ್ರಸ್ತುತ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಬ್ರಿಕ್ಸ್ ವಿಶ್ವದ ಐದು ದೊಡ್ಡ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಒಟ್ಟುಗೂಡಿಸುವ ವೇದಿಕೆಯಾಗಿದೆ. ಇದು ವಿಶ್ವದ ಶೇ. 41 ಜನಸಂಖ್ಯೆ, ಜಾಗತಿಕ ಜಿಡಿಪಿಯ 24 ಪ್ರತಿಶತ ಮತ್ತು ಜಾಗತಿಕ ವ್ಯಾಪಾರದ ಶೇ.16ರಷ್ಟನ್ನು ಪ್ರತಿನಿಧಿಸುತ್ತದೆ.
ಪ್ರಧಾನಿ ಮೋದಿ ಎರಡನೆ ಬಾರಿ ಬ್ರಿಕ್ಸ್ ಶೃಂಗಸಭೆ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement