ಕಲಬುರಗಿ ಪಾಲಿಕೆ ಅಧಿಕಾರ: ಜೆಡಿಎಸ್‌ ಜೊತೆ ಮೈತ್ರಿ ಹೊಣೆ ಸಿಎಂ ಬೊಮ್ಮಾಯಿ ಹೆಗಲಿಗೆ

ಬೆಂಗಳೂರು:ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಹೊಣೆಗಾರಿಕೆಯನ್ನು ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ನೀಡಿದೆ.
ಜೆಡಿಎಸ್ ನಾಯಕರ ಜೊತೆ ಬೊಮ್ಮಾಯಿ ಉತ್ತಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ನೀವೇ ಮಾತುಕತೆ ನಡೆಸಿ ಎಂದು ಪಕ್ಷದ ನಾಯಕರು ಸಲಹೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ಜೆಡಿಎಸ್‍ನೊಂದಿಗೆ ದೋಸ್ತಿ ಕುದುರಿಸಲು ಒಳಗೊಳಗೆ ರಣತಂತ್ರ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಇದೀಗ ದಳಪತಿಗಳ ಜೊತೆ ಮೈತ್ರಿ ಮಾತುಕತೆಗೆ ಸ್ವತಃ ಮುಖ್ಯಮಂತ್ರಿ ಅವರನ್ನೇ ಅಖಾಡಕ್ಕಿಳಿಸಿದ್ದಾರೆ. ಈ ಹಿಂದೆ ಬೊಮ್ಮಾಯಿ ಅವರು ಒಂದು ಬಾರಿ ಕುಮಾರಸ್ವಾಮಿ ಜೊತೆ ಈ ಸಂಬಂಧ ಮಾತನಾಡಿದ್ದರು.
ಆದರೆ, ಕುಮಾರಸ್ವಾಮಿ ಮೈತ್ರಿ ಕುರಿತು ಪಕ್ಷದ ವರಿಷ್ಠ ದೇವೇಗೌಡರು ಹಾಗೂ ಇತರ ಮುಖಂಡರ ಜೊತೆ ಮಾತುಕತೆ ನಡೆಸಿದ ಬಳಿಕ ತೀರ್ಮಾನ ತಿಳಿಸುವುದಾಗಿ ಹೇಳಿದ್ದರು. ಅತ್ತ ಕಾಂಗ್ರೆಸ್‌ ಕೂಡ ಪ್ರಯತ್ನ ನಡೆಸಿದೆ. ಮಾಜಿ ಪ್ರಧಾನಿ ದೇವೇಗೌಡರ ಜೊತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದು, ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಈಗ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅಖಾಡಕ್ಕಿಳಿದಿರುವುದರಿಂದ ದಳಪತಿಗಳು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಸಮ್ಮತಿ ನೀಡುವರೇ ಎಂಬ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಕಲಬುರಗಿ ಮಹಾನಗರ ಪಾಲಿಕೆಯ ಒಟ್ಟು 55 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 27, ಬಿಜೆಪಿ 23 ಜೆಡಿಎಸ್ 4 ಸ್ಥಾನಗಳು ಹಾಗೂ ಪಕ್ಷೇತರ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತದಾನದ ಹಕ್ಕು ಹೊಂದಿರುವುದರಿಂದ ಯಾರೇ ಸರಳವಾಗಿ ಬಹುಮತ ಪಡೆಯಲು 32 ಸದಸ್ಯರ ಬೆಂಬಲ ಬೇಕಾಗುತ್ತದೆ.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement