ಐಟಿಐ ಕಲಿಯುವವರಿಗೆ ಸಿಹಿ ಸುದ್ದಿ..ಈ ವರ್ಷದಿಂದಲೇ ಆರು ಹೊಸ ಕೋರ್ಸ್​ಗಳ ಪ್ರವೇಶಾತಿಗೆ ಅವಕಾಶ

ಬೆಂಗಳೂರು: ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಕಾರ್ಯಕ್ರಮದಡಿ ಈಗಿನ ಬೇಡಿಕೆಗಳಿಗೆ ಅನುಗುಣವಾಗಿ 6 ಹೊಸ ಕೋರ್ಸ್​ಗಳಿಗೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್.ವಿ.ಸಿ.ಟಿ.) ಮಂಗಳವಾರ ಅನುಮೋದನೆ ನೀಡಿದೆ.
ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಶಿಕ್ಷಣ ಸಚಿವ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಗಳ ಇಲಾಖೆ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ನಿರ್ಣಯವು ಎಲ್ಲ 150 ಐ.ಟಿ.ಐ.ಗಳಿಗೂ ಅನ್ವಯವಾಗುತ್ತದೆ. ಈ ಸಾಲಿನಿಂದಲೇ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (Battery Electric Vehicle) 2 ವರ್ಷ, ಬೇಸಿಕ್ಸ್ ಆಫ್ ಡಿಜೈನ್ ಅಂಡ್ ವರ್ಚ್ಯುಯಲ್ ವೆರಿಫಿಕೇಷನ್ (Basics off-design and Virtual Verfication) 2 ವರ್ಷ, ಆರ್ಟಿಸನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್ (Artisan Using Advanced Tools) 1 ವರ್ಷ, ಅಡ್ವಾನ್ಸ್ಡ್ ಮ್ಯಾನಫ್ಯಾಕ್ಚರಿಂಗ್ (Advanced Manufacturing) 1 ವರ್ಷ,ಇಂಡಸ್ಟ್ರಿಯಲ್ ರೊಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಫ್ಯಾಕ್ಚರ್ (Industriial Robotics and Digital Manufacture) 1 ವರ್ಷ, ಮ್ಯಾನಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆಟೊಮೇಷನ್ (Manufacturing Process Control Automation) 1 ವರ್ಷ, ಈ 6 ಕೋರ್ಸುಗಳು ಐಟಿಐಗೆ ಸೇರ್ಪಡೆಯಾಗುತ್ತವೆ ಎಂದು ಸಚಿವರು ತಿಳಿಸಿದರು.
ಅಂತಿಮವಾಗಿ ಈ ಸಂಯೋಜನೆಗಳಿಗೆ ರಾಷ್ಟ್ರೀಯ ವೃತ್ತಿಶಿಕ್ಷಣ ತರಬೇತಿ ಪರಿಷತ್ (ಎನ್.ಸಿ.ವಿ.ಇ.ಟಿ.) ಮಾನ್ಯತೆ ಕೊಡಬೇಕು. ಈಗ ರಾಜ್ಯ ಸರ್ಕಾರವು ಈ ಸಂಯೋಜನೆಗಳ ಪಠ್ಯಕ್ರಮವನ್ನು ಡಿ.ಜಿ.ಟಿ.ಗೆ ಸಲ್ಲಿಸಿದ್ದು, ಅದು ಪ್ರಕ್ರಿಯೆಯಲ್ಲಿದೆ. ಆದರೆ, ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲಕ್ಕೆ ಎನ್.ಸಿ.ವಿ.ಇ,ಟಿ.ಯಿಂದ ಈ 6 ಸಂಯೋಜನೆಗಳಿಗೆ ಮಾನ್ಯತೆ ಪಡೆಯುವ ಷರತ್ತಿಗೊಳಪಟ್ಟು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದೂ ಅಶ್ವತ್ಥ ನಾರಾಯಣ ತಿಳಿಸಿದರು.
3 ತಿಂಗಳ ಅವಧಿಯ 23 ಅಲ್ಪಾವಧಿ ಸರ್ಟಿಫೈಡ್ ಕೋರ್ಸ್​ಗಳಿಗೆ ಕೂಡ ಎಸ್.ವಿ.ಸಿ.ಟಿ.ಯು ಅನುಮೋದನೆ ನೀಡಿದೆ ಎಂದು ಸಚಿವರು ಹೇಳಿದರು.
ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತ ಡಾ. ಹರೀಶ್ ಕುಮಾರ್ ಕೆ. ಮತ್ತಿತರರು ಇದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement