ಏರ್ ಇಂಡಿಯಾ ಮಾರಾಟ: ಟಾಟಾಸ್, ಸ್ಪೈಸ್ ಜೆಟ್ ಸಂಸ್ಥಾಪಕ ಅಜಯ್ ಸಿಂಗ್ ಹಣಕಾಸು ಬಿಡ್ ಸಲ್ಲಿಕೆ: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

ನವದೆಹಲಿ: ಟಾಟಾ ಗ್ರೂಪ್ (Tata Group), ಸ್ಪೈಸ್ ಜೆಟ್ (SpiceJet) ಪ್ರಮೋಟರ್ ಅಜಯ್ ಸಿಂಗ್ ಸೇರಿದಂತೆ ಅನೇಕ ಇತರ ಬಿಡ್ಡರುಗಳು ಸಾಲದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಖರೀದಿಗೆ ತಮ್ಮ ಹಣಕಾಸಿನ ಬಿಡ್ ಅನ್ನು ಬುಧವಾರ ಸಲ್ಲಿಸಿದ್ದಾರೆ ಎಂದು ಕಂಪನಿಯ ವಕ್ತಾರರು ದೃಢಪಡಿಸಿದ್ದಾರೆ.
ಟ್ವೀಟ್ ನಲ್ಲಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ, ವಹಿವಾಟು ಸಲಹೆಗಾರರಿಂದ ಏರ್ ಇಂಡಿಯಾ ಹೂಡಿಕೆಯ ಹಣಕಾಸು ಬಿಡ್‌ಗಳ ಪ್ರಕ್ರಿಯೆ ಈಗ ಮುಕ್ತಾಯದ ಹಂತಕ್ಕೆ ಸಾಗಿದೆ .ಟಾಟಾ ಸನ್ಸ್​ ಬುಧವಾರ (ಸೆಪ್ಟೆಂಬರ್ 15) ಬಿಡ್​ ಸಲ್ಲಿಸಿದೆ. ಬಂಡವಾಳ ಹಿಂತೆಗೆದ ಘೋಷಣೆಯ ನಂತರ ಹಲವು ಖಾಸಗಿ ಕಂಪನಿಗಳು ಏರ್​ ಇಂಡಿಯಾ ಖರೀದಿಗೆ ಬಿಡ್​ ಸಲ್ಲಿಸಿವೆ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ಖರೀದಿಗೆ ಬಿಡ್ ಸಲ್ಲಿಸಲು ಸೆಪ್ಟೆಂಬರ್ 15 ಅಂತಿಮ ದಿನ. ಈ ಗಡುವು ವಿಸ್ತರಿಸುವುದಿಲ್ಲ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಮೊದಲೇ ಸ್ಪಷ್ಟಪಡಿಸಿದ್ದರು. ಪ್ರಸ್ತುತ ಏರ್​ ಇಂಡಿಯಾ ಕಂಪನಿಯು 43,000 ಕೋಟಿ ರೂ.ಗಳ ಸಾಲದ ಸುಳಿಯಲ್ಲಿದೆ. ಈ ಪೈಕಿ 22,000 ಕೋಟಿಯನ್ನು ಏರ್​ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್​ಗೆ (AIAHL) ವರ್ಗಾಯಿಸಲಾಗಿತ್ತು.
ಏರ್​ ಇಂಡಿಯಾ ಮತ್ತು ಅದರ ಅಧೀನದಲ್ಲಿರುವ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯ ಏರ್​ ಇಂಡಿಯಾ ಎಕ್ಸ್​ಪ್ರೆಸ್​ನಲ್ಲಿ ಸರ್ಕಾರವು ತನ್ನ ಬಂಡವಾಳವನ್ನು ಸಂಪೂರ್ಣ ಹಿಂಪಡೆಯಲು ಯೋಜಿಸಿದೆ. ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ನಿರ್ವಹಣೆ ಮತ್ತು ಪ್ರಯಾಣಿಕರಿಗೆ ಪೂರಕ ಸೇವೆ ಒದಗಿಸುವ ಕಂಪನಿಯಾದ ಏರ್ ಇಂಡಿಯಾ ಸ್ಯಾಟ್ಸ್ ಏರ್​ಪೋರ್ಟ್​ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್​ನಿಂದಲೂ (Air India SATS Airport Services Private Limited – AISATS) ಸರ್ಕಾರವು ಅರ್ಧದಷ್ಟು ಬಂಡವಾಳ ಹಿಂಪಡೆಯಲು ಉದ್ದೇಶಿಸಿದೆ.
ಮುಂಬೈನಲ್ಲಿರುವ ಏರ್​ ಇಂಡಿಯಾ ಕಟ್ಟಡ ಮತ್ತು ದೆಹಲಿಯಲ್ಲಿರುವ ಏರ್​ಲೈನ್ಸ್​ ಹೌಸ್​ ಕಟ್ಟಡವೂ ಈ ಹರಾಜು ಪ್ರಕ್ರಿಯೆಯ ಭಾಗವಾಗಿರಲಿದೆ. ಪ್ರಸ್ತುತ ಏರ್ ಇಂಡಿಯಾ ಬಳಿ ಭಾರತದ ವಿಮಾನ ನಿಲ್ದಾಣಗಳಲ್ಲಿ 4,400 ದೇಶೀಯ ಮತ್ತು 1,800 ಅಂತರರಾಷ್ಟ್ರೀಯ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸ್ಲಾಟ್​ಗಳಿವೆ. ವಿದೇಶಗಳಲ್ಲಿ 900 ಸ್ಲಾಟ್​ಗಳಿವೆ. ಏರ್​ ಇಂಡಿಯಾ ಖರೀದಿಸುವ ಕಂಪನಿಗೆ ಈ ಎಲ್ಲ ಸವಲತ್ತುಗಳೂ ದೊರೆಯಲಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ