ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ನಗರದ ಡಿ.ಎ.ಆರ್. ಪೊಲೀಸ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕಲ್ಯಾಣ ಕನಾ೯ಟಕ ಅಭಿವೃದ್ಧಿ ಮಂಡಳಿಗೆ ಮುಂದಿನ ಬಜೆಟ್ಟಿನಲ್ಲಿ 3 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗುವುದು ಎಂದು ಅವರು ಘೋಷಿಸಿದರು.
ಕೆಕೆಆರ್ಡಿಬಿಗೆ (Kalyana Karnataka Region Development Board) ಖಾಯಂ ಕಾರ್ಯದರ್ಶಿ ನೇಮಕ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಕೋಶವನ್ನು ಕಲಬುರಗಿಯಲ್ಲಿ ಪ್ರಾರಂಭ ಮಾಡಲಾಗುವುದು. ಸ್ವಲ್ಪ ಸಮಯ ಕೊಡಿ. ಅಮುಲಾಗ್ರ ಬದಲಾವಣೆ ತರುವ ಕೆಲಸ ನಾನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಕೆಕೆಆರ್ಡಿಬಿಗೆ ನೀಡಿರುವ ಹಣ ಖರ್ಚು ಮಾಡಿ ತೋರಿಸಿದರೆ ಮತ್ತೆ 1500 ಕೋಟಿ ರೂ.ಗಳನ್ನು ಕೊಡಲು ಸಿದ್ಧನಿದ್ದೇನೆ. ಒಟ್ಟು ಮೂರು ಸಾವಿರ ಕೋಟಿ ಹಣವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡುತ್ತೇನೆ ಎಂದು ಹೇಳಿದರು.
ರಾಜ್ಯ ಸರ್ಕಾರ ಇಲ್ಲಿಯವರೆಗೆ ₹8 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಬಿಡುಗಡೆ ಮಾಡಿದ್ದೇವೆ. ಆ ಪೈಕಿ ₹6 ಸಾವಿರ ಕೋಟಿ ಖರ್ಚಾಗಿದೆ. ಉಳಿದ ₹2 ಸಾವಿರ ಕೋಟಿಯನ್ನು ಬರುವ ಮಾರ್ಚ್‌ನೊಳಗೆ ಖರ್ಚು ಮಾಡಬೇಕು. ಅಂದಾಗ ಮಾತ್ರ ಹೆಚ್ಚುವರಿ ₹1500 ಕೋಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಷರತ್ತು ವಿಧಿಸಿದರು.
ಕೆಕೆಆರ್‌ಡಿಬಿ ಮತ್ತು ನಂಜುಂಡಪ್ಪ ವರದಿಯನ್ನು ಹೊಸ ರೂಪದಲ್ಲಿ ವಿಸ್ತರಣೆ ಮಾಡುತ್ತೇವೆ. ಪ್ರತಿ 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಾನೇ ನಡೆಸುತ್ತೇನೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿದ್ದರೆ ಯಡಿಯೂರಪ್ಪನವರು ಕಾರಣ. ಈ ಭಾಗದ ಮೇಲೆ ಯಡಿಯೂರಪ್ಪನವರಿಗೆ ಹೆಚ್ಚಿನ ಪ್ರೀತಿ ಇತ್ತು. ಕಲ್ಯಾಣ ಕರ್ನಾಟಕ ಮತ್ತು ಮೋದಿ ಅವರಿಗೆ ಸಂಬಂಧವಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನದಂದೇ ಪ್ರಧಾನಿ ಮೋದಿ ಅವರ ಜನ್ಮದಿನ ಕೂಡಾ ಹೌದು ಎಂದರು.
ಸರ್ದಾರ್ ಪಟೇಲರ ಇಚ್ಛಾಶಕ್ತಿ, ಶ್ರಮದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಕರ್ನಾಟಕ ಏಕೀಕರಣದಲ್ಲಿ ಹಿರಿಯರ ಪಾತ್ರ ದೊಡ್ಡದಿದೆ. ಏಕಿಕರಣವಾದರೂ ಏಕಿಕರಣದ ಲಾಭ ಎಲ್ಲಾ ಭಾಗಕ್ಕೂ ಆಗಿಲ್ಲ ಎಂಬ ಕೊರಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ 371(ಜೆ) ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ, ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಸೇಡಂ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ.ಉಮೇಶ ಜಾಧವ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನಸಭೆ ಶಾಸಕರುಗಳಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮಡು, ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ