ಟಾಟಾ ಉದ್ಯಮ ಲಾಭಾಂಶದ ಬಹುಪಾಲನ್ನು ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿಗೆ ನೀಡುತ್ತಿದೆ: ಡಾ.ಅಜಿತ್ ಪ್ರಸಾದ

ಧಾರವಾಡ: ದೇಶದ ಅತಿ ದೊಡ್ಡ ಉದ್ಯಮವಾದ ಟಾಟಾ ತನ್ನ ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಸಾರ್ವಜನಿಕರ ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿಗಾಗಿ ಖರ್ಚು ಮಾಡುತ್ತಿದೆ. ಪರಿಸರದಿಂದ ಬಹಳಷ್ಟನ್ನು ಪಡೆಯುವ ನಾವು ಪರಿಸರಕ್ಕೆ ಏನನ್ನಾದರೂ ತಿರುಗಿ ನೀಡದಿದ್ದರೆ, ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ಬಿಟ್ಟು ಹೋದಂತಾಗುತ್ತದೆ ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ್ ಪ್ರಸಾದ್ ಹೇಳಿದರು.
ಅವರು ಜೆಎಸ್ಎಸ್ ಆವರಣದಲ್ಲಿ ಟಾಟಾ ಉದ್ಯಮ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್‌ ಸಂದರ್ಭದಲ್ಲಿ ನಾವು ಆಮ್ಲಜನಕದ ಮಹತ್ವವನ್ನು ಅರಿತಿದ್ದೇವೆ. ಪರಿಸರದ ಸಮತೋಲನಕ್ಕಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಟಾಟಾ ಉದ್ಯಮ ಜೆ.ಎಸ್.ಎಸ್ ಸಂಸ್ಥೆಯೊಡನೆ ಕೈಜೋಡಿಸಿರುವುದು ಶ್ಲಾಘನೀಯ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲೂ ಸಹ ಜೆ.ಎಸ್.ಎಸ್ ಸಂಸ್ಥೆ ಟಾಟಾ ಉದ್ಯಮದ ಜತೆ ಕೈಜೋಡಿಸುತ್ತದೆ. ಟಾಟಾ ಮೋಟಾರ್ಸ್‌ನವರು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಹಾಗೂ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ನೀಡುವ ನಿಟ್ಟಿನಲ್ಲಿ ಈಗಾಗಲೇ ನಮ್ಮ ಸಂಸ್ಥೆಯೊಂದಿಗೆ ಉದ್ಯೋಗ ಮತ್ತು ತರಬೇತಿಗಾಗಿ ಒಡಂಬಡಿಕೆ ಕೂಡ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಟಾಟಾ ಮೋಟಾರ್ಸ್‌ ಘಟಕದ ಮುಖ್ಯಸ್ಥರಾದ ಮಹೇಶ ಸುಗೂರ್ ಮಾತನಾಡಿ, ಉದ್ಯಮ ಕೇವಲ ಲಾಭಗಳಿಸುವುದು ಮಾತ್ರವಲ್ಲ. ತನ್ನ ಸುತ್ತಮುತ್ತಲಿರುವ ಭಾಗದ ಜನರ ಆರೋಗ್ಯ, ಶಿಕ್ಷಣ, ಉದ್ಯೋಗ, ಪರಿಸರ ಇವುಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಟಾಟಾ ಮೋಟಾರ್ಸ್‌ ಈ ದಿಸೆಯಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ಶ್ರೇಷ್ಠವಾದ ಸಂಸ್ಥೆ ಜೆ.ಎಸ್.ಎಸ್. ನಮ್ಮೊಡನೆ ಕೈ ಜೋಡಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಾಟಾ ಮೋಟಾರ್ಸ್‌ ಹಿರಿಯ ಸಂಪನ್ಮೂಲ ಅಧಿಕಾರಿಗಳಾದ ಡಿ.ಎಸ್.ಆರ್ ಪ್ರಭು, ಜನರಲ್ ಮ್ಯಾನೇಜರ್ ರಾಜಶೇಖರ ಬೆಲ್ಲದ, ಶರಣಗೌಡ ದೇಸಾಯಿ, ಜೆ.ಎಸ್.ಎಸ್ ಸಂಸ್ಥೆಯ ಮಹಾವೀರ ಉಪಾದ್ಯೆ, ಸೂರಜ್ ಜೈನ್, ಜಿನೇಂದ್ರ ಕುಂದಗೋಳ ಹಾಗೂ ಇತರರು ಉಪಸ್ಥಿತರಿದ್ದರು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement