ಅಮೆರಿಕದ ಪರಮಾಣು ಸಾಮರ್ಥ್ಯದ ಸಬ್ ಮೆರಿನ್ ಖರೀದಿಗೆ ನಿರ್ಧಾರ: ಆಸ್ಟ್ರೇಲಿಯಾಕ್ಕೆ ಚೀನಾ ಎಚ್ಚರಿಕೆ

ಬೀಜಿಂಗ್: ತನ್ನ ತೀವ್ರ ಆಕ್ಷೇಪದ ಹೊರತಾಗಿಯೂ ಆಸ್ಟ್ರೇಲಿಯಾವು ಅಮೆರಿಕದ ಪರಮಾಣುಶಕ್ತ ಸಬ್ ಮೆರೀನ್ ಖರೀದಿಗೆ ನಿರ್ಧರಿಸಿರುವ ಬಗ್ಗೆ ಆಕ್ರೋಶಗೊಂಡಿರುವ ಚೀನಾ, ತನ್ನ ಸಾರ್ವಭೌಮತೆಯ ವ್ಯಾಪ್ತಿಯ ಆಗಸ ಮತ್ತು ಜಲಕ್ಷೇತ್ರದ ಕಾನೂನುಬದ್ಧ ಆಡಳಿತದ ರಕ್ಷಣೆಯಲ್ಲಿ ಎದುರಾಗುವ ಯಾವುದೇ ಹಸ್ತಕ್ಷೇಪವನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.
ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆ(ಎಸ್ ಸಿಒ) ಸಭೆಗೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ‘ ನಮ್ಮ ವಲಯದಲ್ಲಿ ಯಾವುದೇ ಕಾರಣಕ್ಕೂ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಮತ್ತು ನಮ್ಮ ದೇಶದ ಭವಿಷ್ಯ, ಪ್ರಗತಿ ಮತ್ತು ಅಭಿವೃದ್ಧಿಯ ಚುಕ್ಕಾಣಿಯನ್ನು ನಮ್ಮ ಕೈಯಲ್ಲೇ ದೃಢವಾಗಿ ಇರಿಸಿಕೊಳ್ಳಬೇಕು’ ಎಂದು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.
ಆಸ್ಟ್ರೇಲಿಯಾವನ್ನು ಅಮೆರಿಕ ದಾಳದಂತೆ ಬಳಸಿಕೊಳ್ಳುತ್ತಿದೆ. ಆ ದೇಶವು ಅಮೆರಿಕದ ಶೀತಲ ಸಮರ ಯೋಜನೆಗೆ ಆರ್ಥಿಕ ನೆರವು ನೀಡುವ ಸ್ಥಳೀಯ ಸಂಸ್ಥೆಯಾಗಿದೆ. ಒಂದು ವೇಳೆ ಈ ವಲಯದಲ್ಲಿ ಸೇನಾ ಮುಖಾಮುಖಿಯ ಸಂದರ್ಭ ಬಂದರೆ ಆಗ ಆಸ್ಟ್ರೇಲಿಯಾ ಅತ್ಯಂತ ಅಪಾಯಕಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಗ್ಲೋಬಲ್ ಟೈಮ್ಸ್ ಎಚ್ಚರಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಚೀನಾವು ಪರಮಾಣು ಶಕ್ತ ಸಬ್ಮೆರೀನ್ ಅಭಿವೃದ್ಧಿಪಡಿಸುತ್ತಿರುವುದು ಋಜುವಾತಾಗಿದೆ. ತಮ್ಮ ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವ ಕುರಿತು ಹಕ್ಕು ಎಲ್ಲ ದೇಶಗಳಿಗೂ ಇದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement