ಕಾಬೂಲ್ ನಗರ ಮಹಿಳಾ ನೌಕರರಿಗೆ ಮನೆಯಲ್ಲೇ ಇರಿ ಎಂದು ತಾಲಿಬಾನ್ ಆದೇಶ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಗರದ ಮಹಿಳಾ ಉದ್ಯೋಗಿಗಳಿಗೆ ದೇಶದ ಹೊಸ ತಾಲಿಬಾನ್ ಆಡಳಿತಗಾರರು ಮನೆಯಲ್ಲೇ ಇರುವಂತೆ ಆದೇಶಿಸಿದೆ ಎಂದು ಹಂಗಾಮಿ ಮೇಯರ್ ಹೇಳಿದ್ದಾರೆ.
ಪುರುಷರಿಂದ ಮಾಡಲು ಸಾಧ್ಯವಾಗದೇ ಇರುವ ಅಥವಾ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಹೇಳುವ ಕೆಲಸಕ್ಕೆ ಮಾತ್ರ ಅವರಿಗೆ ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಹಮ್ದುಲ್ಲಾ ನಮೋನಿ (Hamdullah Namony) ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದು ವಿನ್ಯಾಸ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ನುರಿತ ಕೆಲಸಗಾರರು ಹಾಗೂ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯಗಳ ಮಹಿಳಾ ಪರಿಚಾರಕರನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸುಧಾರಣಾವಾದಿಯಾಗುವ ಆರಂಭಿಕ ಭರವಸೆಗಳ ಹೊರತಾಗಿಯೂ, ತಾಲಿಬಾನ್‌ ಇಸ್ಲಾಂನ ಕಠಿಣ ವ್ಯಾಖ್ಯಾನವನ್ನೇ ಜಾರಿಗೊಳಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿ ಮಹಿಳೆಯರಿಗೆ ನಿರ್ಬಂಧಗಳನ್ನು ವಿಧಿಸಿರುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. 1990ರ ದಶಕದಲ್ಲಿ ಅವರ ಹಿಂದಿನ ಆಡಳಿತದಲ್ಲಿ, ತಾಲಿಬಾನ್ ಹುಡುಗಿಯರು ಮತ್ತು ಮಹಿಳೆಯರನ್ನು ಶಾಲೆಗಳು ಮತ್ತು ಉದ್ಯೋಗಗಳಿಗೆ ನಿರ್ಬಂಧಿಸಲಾಗಿತ್ತು.
ಕಾಬೂಲ್ ಪುರಸಭೆಯ ಇಲಾಖೆಗಳಲ್ಲಿ ಮಹಿಳಾ ಉದ್ಯೋಗಿಗಳ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ ಮತ್ತು ಈ ಮಧ್ಯೆ ಅವರು ತಮ್ಮ ಸಂಬಳವನ್ನು ತೆಗೆದುಕೊಳ್ಳುತ್ತಾರೆ ಎಂದು ಮೇಯರ್ ಹೇಳಿರುವುದಾಗಿ ಅಸೋಸಿಯೇಟ್ ಪ್ರೆಸ್ ವರದಿ ಮಾಡಿದೆ.
ಕಳೆದ ತಿಂಗಳು ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವ ಮೊದಲು, 3,000 ನಗರ ಉದ್ಯೋಗಿಗಳ ಪೈಕಿ ಕೇವಲ ಮೂರನೇ ಒಂದು ಭಾಗದಷ್ಟು ಮಹಿಳೆಯರು ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಮೋನಿ ಹೇಳಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement