ಕಾರು ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಶರಣಬಸವ ವಿವಿ ಕುಲಸಚಿವರು ಸಾವು

ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಹತ್ತಿರ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ (50) ಮೃತಪಟ್ಟಿದ್ದಾರೆ.
ಬಸವಕಲ್ಯಾಣದಿಂದ ಕಲಬುರಗಿಗೆ ಕಾರಿನಲ್ಲಿ ಹೋಗುವಾಗ ಹಣಮಂತವಾಡಿ-ಮುಡಬಿ ಮಧ್ಯ ಕಡೋಳ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಶಾಸ್ತ್ರಿ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಮತ್ತು ಪುತ್ರನಿಗೆ ಗಾಯವಾಗಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮರದಲ್ಲಿದ್ದ ಜೇನು ಹುಳುಗಳು ಸಹ ಕಡಿದಿವೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಮುಡಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಜಿನಿಯರಿಂಗ್ ಪದವಿಧರರಾಗಿದ್ದ ಅವರು ಶರಣಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದರು. ನಂತರ ಶರಣಬಸವ ವಿಶ್ವ ವಿದ್ಯಾಲಯದಲ್ಲಿ ಕುಲಸಚಿವ (ಮೌಲ್ಯಮಾಪನ)ರಾಗಿ ಸೇವೆ ಸಲ್ಲಿಸುತ್ತಿದ್ದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement