ಮೂರು ತಿಂಗಳ ಬಳಿಕ ಸಮಾಧಿ ಅಗೆದು ತಾಯಿಯ ಶವವನ್ನು ಬೈಕ್​ನಲ್ಲಿ ತಂದ ಮಕ್ಕಳು…!

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಆಡಾಪುರ ಗ್ರಾಮದ ಮಹಿಳೆಯ ಸಾವಿನ ಪ್ರಕರಣದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ತಮ್ಮ ತಾಯಿಯ ಸಾವಿನ ತನಿಖೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಲಾಗಿದೆ ಹಾಗೂ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿರುವ ಇಬ್ಬರು ಪುತ್ರರು, ಸಮಾಧಿ ಮಾಡಿದ ಸುಮಾರು ಮೂರು ತಿಂಗಳ ಬಳಿಕ ತಾಯಿಯ ಶವವನ್ನು ಹೊರತೆಗೆದು ಬಟ್ಟೆಯಲ್ಲಿ ಸುತ್ತಿಕೊಂಡು ರಾತ್ರೋರಾತ್ರಿ ಜಿಲ್ಲಾ ಆಸ್ಪತ್ರೆಗೆ ತಂದ ಘಟನೆ ವರದಿಯಾಗಿದೆ. ಶವ ಸಾಗಿಸುವಾಗ ಅವರ ಬೈಕ್‌ ಅಪಘಾತಕ್ಕೀಡಾಗಿದೆ.
ಮಹಿಳೆ ಈರಮ್ಮ (58)  ಅವರು ಏಪ್ರಿಲ್ 29ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಆರಂಭದಿಂದಲೂ ಅವರ ಪುತ್ರರಾದ ಮಂಜುನಾಥ ಮತ್ತು ವೆಂಕಟೇಶ ಎಂಬವರು ತಮ್ಮ ತಾಯಿಯದ್ದು ಸಹಜ ಸಾವು ಅಲ್ಲ, ಕೊಲೆ ಎಂದು ಆರೋಪಿಸುತ್ತಾ, ತಮ್ಮ ನೆರೆಹೊರೆಯ 11 ಮಂದಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈರಮ್ಮ ಅವರ ಮರಣದ ಬಳಿಕ ಮಲೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ನಂತರ ಅವರ ಮೃತದೇಹವನ್ನು ಹೂಳಲಾಗಿತ್ತು.

ಆದರೆ, ಮರಣೋತ್ತರ ಪರೀಕ್ಷೆಯನ್ನು ಅತ್ಯಂತ ಆತುರದಲ್ಲಿ ನಡೆಸಲಾಗಿದ್ದು, ಸಮಗ್ರ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಶನಿವಾರ ತಡರಾತ್ರಿ ಮಂಜುನಾಥ ಮತ್ತು ವೆಂಕಟೇಶ ತಾಯಿಯ ಶವವನ್ನು ಸಮಾಧಿಯಿಂದ ಹೊರತೆಗೆದು, ಬೆಡ್‌ಶೀಟ್‌ನಲ್ಲಿ ಸುತ್ತಿ ಮೋಟಾರ್‌ಸೈಕಲ್‌ನಲ್ಲಿ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಅವರ ಮೋಟಾರ್‌ಸೈಕಲ್ ಸ್ಕಿಡ್‌ ಆಗಿ ಬಿದ್ದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು   ಮೃತದೇಹವನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ತಂದಿದ್ದಾರೆ.
ಈ ವೇಳೆ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ನಾಲ್ಕು ಅಡಿ ಜಾಗದ ವಿವಾದವೇ ತಮ್ಮ ತಾಯಿಯ ಹತ್ಯೆಗೆ ಕಾರಣ ಎಂದು ಆರೋಪಿಸಿದರು. ನ್ಯಾಯಕ್ಕಾಗಿ ಹಲವು ಬಾರಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಯಾವುದೇ ನ್ಯಾಯ ದೊರೆತಿಲ್ಲ ಎಂದು ಮಕ್ಕಳು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ವಿಡಿಯೊ | ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಯುವಕನಿಗೆ ಗಂಭೀರ ಗಾಯ

ಈ ಕುರಿತು ಮಾಹಿತಿ ನೀಡಿದ ಮಲೆಬೆನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ, ಮೃತಳ ಪುತ್ರರು ನೀಡಿದ ದೂರಿನ ಆಧಾರದ ಮೇಲೆ ಈಗಾಗಲೇ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ, ಆರೋಪಿಗಳ ಪೈಕಿ ಆರು ಮಂದಿ ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.
ಇದೇ ವೇಳೆ, ಪ್ರಕರಣದ ತನಿಖೆ ಮುಂದುವರಿದಿದ್ದು, ಶವವನ್ನು ಸಮಾಧಿಯಿಂದ ಹೊರತೆಗೆದು ಆಸ್ಪತ್ರೆಗೆ ತಂದ ಘಟನೆ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಶವವನ್ನು ಹೊರತೆಗೆದ ಘಟನೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಯನ್ನು ಪೊಲೀಸರು ಒಪ್ಪಿಕೊಂಡಿದ್ದಾರೆ. ತನಿಖೆ ಸಕ್ರಿಯವಾಗಿದೆ ಮತ್ತು ಪ್ರಕರಣದ ಪರಿಶೀಲನೆ ಮುಂದುವರೆದಿರುವುದರಿಂದ ಮರು ಮರಣೋತ್ತರ ಪರೀಕ್ಷೆಯ ಬೇಡಿಕೆಯನ್ನು ಕಾನೂನು ವಿಧಾನಗಳ ಪ್ರಕಾರ ನಿರ್ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅನುಮತಿಯಿಲ್ಲದೆ ಶವವನ್ನು ಹೊರತೆಗೆದ ಕಾರಣಕ್ಕೆ ಸಹೋದರರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎನ್ನಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement