ಕಾರವಾರ : ಮನರಂಜನೆ ಮತ್ತು ಸಾಹಸ ಅನುಭವಕ್ಕಾಗಿ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಜಿಪ್‌ಲೈನ್ ಸವಾರಿ ದುಸ್ವಪ್ನವಾಗಿ ಪರಿಣಮಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ರೆಸಾರ್ಟ್ ಒಂದರಲ್ಲಿ ನಡೆದಿದೆ. ಜಿಪ್‌ಲೈನ್ ಸವಾರಿಯ ವೇಳೆ ಸುರಕ್ಷತಾ ವ್ಯವಸ್ಥೆ (ಸೇಫ್ಟಿ ಲಾಕ್) ಕೈಕೊಟ್ಟ ಪರಿಣಾಮ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜುಲೈ 3ರಂದು ದಾಂಡೇಲಿಯ ರೆಸಾರ್ಟ್ ಒಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ನಿವಾಸಿ ಕುಬೇರ ಸುರಪುರ ಅವರು ತಮ್ಮ ಸಹೋದರ ಪ್ರಶಾಂತ ಜೊತೆ ರೆಸಾರ್ಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕುಬೇರ ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ಭಾಗವಹಿಸಿದ್ದರು.
ಕುಟುಂಬದವರ ಆರೋಪದ ಪ್ರಕಾರ, ಕುಬೇರ ಅವರು ಜಿಪ್‌ಲೈನ್‌ನಲ್ಲಿ ಅರ್ಧದಷ್ಟು ದೂರ ಸಾಗುತ್ತಿದ್ದಾಗ ಸುರಕ್ಷತಾ ಲಾಕ್ ಏಕಾಏಕಿ ತುಂಡಾಗಿ, ಸುಮಾರು 40 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ.
ಈ ಘಟನೆ ಸಂಪೂರ್ಣವಾಗಿ ಮೊಬೈಲ್‌ನಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ ಕುಬೇರ ಜಿಪ್‌ಲೈನ್‌ನಲ್ಲಿ ವೇಗವಾಗಿ ಸಾಗುತ್ತಿದ್ದ ವೇಳೆ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಕೆಳಗೆ ಬೀಳುವ ದೃಶ್ಯ ಕಂಡುಬರುತ್ತದೆ.
ಈ ಘಟನೆಯಲ್ಲಿ ಕುಬೇರ ಅವರಿಗೆ ಎರಡೂ ಕೈಗಳು ಹಾಗೂ ಎರಡೂ ಕಾಲುಗಳಲ್ಲಿ ಮುರಿತ ಉಂಟಾಗಿದ್ದು, ನರಗಳಿಗೆ ಕೂಡ ಹಾನಿಯಾಗಿದೆ ಎನ್ನಲಾಗಿದೆ.
ಗಾಯಗೊಂಡ ಕುಬೇರ ಅವರನ್ನು ಮೊದಲಿಗೆ ತುರ್ತು ಚಿಕಿತ್ಸೆಗೆ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ನಂತರ ಮಹಾರಾಷ್ಟ್ರದ ಮಿರಜ್‌ನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವೈದ್ಯರ ಮಾಹಿತಿ ಪ್ರಕಾರ, ಕುಬೇರ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೈ ಮತ್ತು ಕಾಲುಗಳಿಗೆ ಇನ್ನೂ ಹಲವು ಶಸ್ತ್ರಚಿಕಿತ್ಸೆಗಳು ಅಗತ್ಯವಿದ್ದು, ಚಿಕಿತ್ಸೆ ಮುಂದುವರಿದಿದೆ.
ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯದ ಆರೋಪ
ಘಟನೆಗೆ ಸಂಬಂಧಿಸಿದಂತೆ ಕುಬೇರ ಅವರ ಕುಟುಂಬ ರೆಸಾರ್ಟ್ ಆಡಳಿತದ ವಿರುದ್ಧ ಆರೋಪಗಳನ್ನು ಮಾಡಿದೆ. ಜಿಪ್‌ಲೈನ್ ಸವಾರಿಗೆ ಅವಕಾಶ ನೀಡುವ ಮೊದಲು ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಅಪಘಾತದ ಬಳಿಕ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ರೆಸಾರ್ಟ್ ಆಡಳಿತ ಆರಂಭದಲ್ಲಿ ಭರವಸೆ ನೀಡಿತ್ತು. ಆದರೆ ನಂತರ ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತಿದ್ದರೂ ಅದು ತಮ್ಮ ಕರೆಗಳಿಗೆ ಸ್ಪಂದಿಸುತ್ತಿಲ್ಲ ಹಾಗೂ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಕುಟುಂಬದವರು ದೂರಿದ್ದಾರೆ.
ರೆಸಾರ್ಟ್ ಘಟನೆ ನಡೆದಿರುವುದನ್ನು ಒಪ್ಪಿಕೊಂಡಿದ್ದರೂ, ನಿರ್ಲಕ್ಷ್ಯದ ಆರೋಪಗಳನ್ನು ತಳ್ಳಿಹಾಕಿದೆ. ಇದು ಅತ್ಯಂತ ದುರದೃಷ್ಟಕರ ಅಪಘಾತವಾಗಿದ್ದು, ಆ ಸಮಯದಲ್ಲಿ ಎಲ್ಲಾ ನಿಗದಿತ ಸುರಕ್ಷತಾ ಪ್ರೋಟೋಕಾಲ್‌ಗನ್ನು ಅನುಸರಿಸಲಾಗಿದೆ ಎಂದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ