ಬ್ಯಾಡರಹಳ್ಳಿ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣ:ಡೆತ್‌ನೋಟ್‌ನಲ್ಲಿ ಅಪ್ಪನ ವಿರುದ್ದವೇ ಮಕ್ಕಳ ಆರೋಪ

ಬೆಂಗಳೂರು: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೆಯಲ್ಲಿ ನಡೆಯುತ್ತಿದ್ದ ಜಗಳವೇ ಈ ಘಟನೆಗೆ ಕಾರಣ ಎಂಬುದು ಪೋಲೀಸರ ತನಿಖೆಯಿಂದ ತಿಳಿದುಬಂದಿದೆ.
ಇಂದು ಬೆಳಗ್ಗೆ ಪೋಲೀಸರು ಶಂಕರ್ ಮನೆಯನ್ನು ಸಂಪೂರ್ಣ ಮೊಹಜರು ನಡೆಸುತ್ತಿದ್ದಾಗ ದೊರೆತ ಡೆತ್ ನೋಟ್‍ಗಳಲ್ಲಿ ಅಪ್ಪನ ಅಕ್ರಮ ಸಂಬಂಧದ ಬಗ್ಗೆ ಹಾಗೂ ಅದರ ಬಗ್ಗೆ ನಡೆಯುತ್ತಿದ್ದ ಜಗಳದ ಬಗ್ಗೆ ಉಲ್ಲೇಖಿಸಿರುವುದು ಕಂಡುಬಂದಿದೆ ಎಂದು ಈ ಸಂಜೆ.ಕಾಮ್‌ ವರದಿ ಮಾಡಿದೆ.
ಮಗ ಮಧುಸಾಗರ್ ಕೊಠಡಿಯಲ್ಲಿ ದೊರೆತ ಡೆತ್‍ನೋಟುಗಳು ಸಿಕ್ಕಿವೆ.  ನನ್ನ ಲ್ಯಾಪ್‍ಟಾಪ್‍ನಲ್ಲಿ ಅದರ ಸಂಪೂರ್ಣ ವಿವರವಿದೆ ಎಂದು ಮಧು ಸಾಗರ್‌ ಬರೆದಿದ್ದಾರೆ. ಪೋಲೀಸರು ಆತನ ಕೊಠಡಿಯಲ್ಲಿದ್ದ ಲ್ಯಾಪ್‍ಟಾಪ್‍ನ್ನು ವಶಪಡಿಸಿಕೊಂಡಿದ್ದು, ತಜ್ಞರನ್ನು ಕರೆಸಿ ಲ್ಯಾಪ್‍ಟಾಪ್‍ನಲ್ಲಿನ ಡಾಟಾವನ್ನು ತೆಗೆಸಿ ಅದರಲ್ಲಿರುವ ವಿವರಗಳನ್ನು ಕಲೆಹಾಕಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹೆಣ್ಣುಮಕ್ಕಳಾದ ಸಿಂಚನ ಹಾಗೂ ಸಿಂಧೂರಾಣಿ ಕೊಠಡಿಗಳಲ್ಲಿ ದೊರೆತ ಡೆತ್‍ನೋಟ್‍ಗಳಲ್ಲಿಯೂ ಇದು ಕಂಡುಬಂದಿದೆ.ಡೆತ್‍ನೋಟ್‍ನಲ್ಲಿ ಸಿಂಚನ , ಗಂಡನ ಮನೆಯಲ್ಲಿ ನೆಮ್ಮದಿಯಿಲ್ಲ, ತವರು ಮನೆಯಲ್ಲೂ ನೆಮ್ಮದಿಯಿರಲಿಲ್ಲ ಎಂದು ಬರೆದಿದ್ದು, ಈ ಬಗ್ಗೆಯೂ ಸಹ ಪೋಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಅಪಾರ ಚಿನ್ನ ಹಾಗೂ ಹಣ ಪತ್ತೆ:
ಮನೆಯ ಪ್ರತಿಯೊಂದು ಕೊಠಡಿ ಮೂಲೆ ಮೂಲೆಯಲ್ಲಿ ಪೋಲೀಸರು ಪರಿಶೀಲಿಸುತ್ತಿದ್ದಾಗ ಸುಮಾರು 1 ಕೆಜಿ ಚಿನ್ನ ಹಾಗೂ 10ರಿಂದ 12 ಲಕ್ಷ ರೂ. ಹಣ ಕಂಡುಬಂದಿದೆ. ಮನೆಯನ್ನು ಸಂಪೂರ್ಣ ಮಹಜರು ಮಾಡಿದ ಸಂದರ್ಭದಲ್ಲಿ ಮೂರು ಡೆತ್‍ನೋಟ್‍ಗಳು ಸಿಕ್ಕಿವೆ.
ಮಹಜರು ವೇಳೆ ಸಿಂಚನಾ ಕೊಠಡಿಯಲ್ಲಿ ಒಂದು ಡೆತ್‍ನೋಟ್, ಸಿಂಧುರಾಣಿ ಕೊಠಡಿಯಲ್ಲಿ ಮತ್ತೊಂದು ಡೆತ್‍ನೋಟ್ ಹಾಗೂ ಮಧುಸಾಗರ್ ಕೊಠಡಿಯಲ್ಲಿ ಇನ್ನೊಂದು ಪ್ರತ್ಯೇಕ ಡೆತ್‍ನೋಟ್ ಪತ್ತೆಯಾಗಿದೆ  ಎನ್ನಲಾಗಿದ್ದು ಈ ಬಗ್ಗೆ ಇರುವ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯಲಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ಈ ಡೆತ್‍ನೋಟ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿರುವ ಮಾಹಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ತಿಗಳರಪಾಳ್ಯದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗುವೊಂದು ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ದೃಷ್ಟಿಯಿಂದ ಈ ಮನೆಗೆ ಬೀಗ ಹಾಕಿದ್ದರು. ಇಂದು ಮನೆಯ ಸಂಪೂರ್ಣ ವಿಡಿಯೋ ಚಿತ್ರಣಕ್ಕಾಗಿ ಮನೆಯ ಬೀಗ ತೆಗೆದು ಚಿತ್ರೀಕರಣ ಮಾಡಿದ್ದಾರೆ.

ಡೆತ್‌ನೋಟ್‌ನಲ್ಲಿರುವ ಅಂಶಗಳು ಸತ್ಯ ಎಮದು ಕಂಡುಬಂದರೆ ಶಂಕರ್   ವಿರುದ್ಧ ಪ್ರಕರಣ ದಾಖಲಾಗಲಿದೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement