ಹುಬ್ಬಳ್ಳಿ: ಚಿರತೆ ಹಿಡಿಯುವವರೆಗೆ ನೃಪತುಂಗ ಬೆಟ್ಟದ ಸುತ್ತಲಿನ 12 ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

posted in: ರಾಜ್ಯ | 0

ಹುಬ್ಬಳ್ಳಿ: ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಕಂಡುಬಂದ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದ್ದು, ಬೆಟ್ಟದ ಸಮೀಪದ ಜನತಾ ಪ್ರೌಢಶಾಲೆ ಹಾಗೂ ಶಿರಡಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ವಿವಿಧ 12 ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜನಗರದ ಕೇಂದ್ರೀಯ ವಿದ್ಯಾಲಯಕ್ಕೆ ಈಗಾಗಲೇ ಭೌತಿಕ ತರಗತಿ ರದ್ದುಗೊಳಿಸಿ ಆದೇಶಿಸಿದೆ. ಅದರಂತೆ ನಾಳೆಯಿಂದ ಹುಬ್ಬಳ್ಳಿಯ ಜನತಾ ಪ್ರೌಢಶಾಲೆ ಹಾಗೂ ಶಿರಡಿ ನಗರ, ಚಾಮುಂಡೇಶ್ವರಿ ನಗರ, ಸಂತೋಷ ನಗರ, ಅಶೋಕ ನಗರ, ವಿಶ್ವೇಶ್ವರ ನಗರಗಳಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ವಿಶ್ವೇಶ್ವರ ನಗರದ ಸರ್ಕಾರಿ ಪ್ರೌಢಶಾಲೆ, ಜೆ.ಕೆ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಡಿ.ಕೆ. ಪಬ್ಲಿಕ್ ಸ್ಕೂಲ್, ಚೈತ್ರಾ ಕನ್ನಡ ಕಾನ್ವೆಂಟ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ವಿ.ಎಸ್. ಪಿಳ್ಳೆ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಎನ್.ಕೆ. ಠಕ್ಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸೇರಿದಂತೆ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ 12 ಶಾಲೆಗಳಿಗೆ ಚಿರತೆ ಸೆರೆ ಹಿಡಿಯುವವರೆಗೆ ರಜೆ ಘೊಷಿಸಲಾಗಿದೆ. ಮತ್ತು ಶಾಲೆಗಳು ಪುನರಾರಂಭವಾಗುವ ವರೆಗೆ ಶಾಲಾ ಮಕ್ಕಳ ಪಾಠ ಬೋಧನೆಯನ್ನು ಆನ್‍ಲೈನ್ ಮೂಲಕ ಮುಂದುವರೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ಕುರಿತು ಆದೇಶಿಸಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ, ಪಾಲಕರಿಗೆ ಮುತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಹಾಗೂ ಹುಬ್ಬಳ್ಳಿ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ಚಿರತೆ ಕಾರ್ಯಾಚರಣೆ ಪೂರ್ಣಗೊಳಿಸಿ, ಮುಂದಿನ ಆದೇಶ ಹೊರಡಿಸುವ ವರೆಗೆ ಈ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳಬಾರದೆಂದು ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ