ಭಿಕ್ಷೆ ಬೇಡುವ 14ರ ಬಾಲಕಿಗೆ ತಿಂಡಿ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ :ದೂರು ದಾಖಲು

posted in: ರಾಜ್ಯ | 0

ಧಾರವಾಡ: ತಿಂಡಿ-ತಿನಿಸು, ಹಣದ ಆಸೆ ತೋರಿಸಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
14 ವರ್ಷದ ಬಾಲಕಿಯೊಬ್ಬಳು ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದಿತ್ತು. ಅಲ್ಲದೆ, ಬಾಲಕಿಯನ್ನು ಯುವಕನೊಬ್ಬ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಸಾರ್ವಜನಿಕರು ಆತನಿಗೆ ಥಳಿಸಿರುವ ಘಟನೆ ಬಗ್ಗೆಯೂ ಮಕ್ಕಳ ಸಹಾಯವಾಣಿಗೆ ದೂರುಗಳು ಬಂದಿತ್ತು. ಈ ದೂರಿನ ಈ ಮಾಹಿತಿಯನ್ನಾಧರಿಸಿ ಬಾಲಕಿಯನ್ನು ಹುಡುಕಲಾಯಿತು ಹಾಗೂ ನವನಗರದ ತಂಗುದಾಣವೊಂದರಲ್ಲಿ ಪತ್ತೆ ಹಚ್ಚಲಾಗಿತ್ತು. ಇದಾದ ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ಕೈಗೊಂಡಾಗ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಬೆಳಕಿಗೆ ಬಂದಿದೆ. ಎಗ್‍ರೈಸ್ ಹಾಗೂ ಗೋಬಿ ತಿನ್ನಿಸುವ ಆಸೆ ತೊರಿಸಿ ಅತ್ಯಾಚಾರ ನಡೆಸಲಾಗುತ್ತಿತ್ತು ಎಂದು ಬಾಲಕಿ ಹೇಳಿದ್ದಾಳೆ.

ಬಾಲಕಿಯನ್ನು ನಿರ್ಭಯಾ ಕೇಂದ್ರದಲ್ಲಿ ಇಡಲಾಗಿದ್ದು, ಅತ್ಯಾಚಾರ ನಡೆಸಿದವರು ಯಾರು ಎಂದು ಬಾಲಕಿಗೆ ಗೊತ್ತಿಲ್ಲ. ಆದರೆ ಅವರನ್ನು ನೋಡಿದರೆ ಗುರುತು ಹಿಡಿಯುವದಾಗಿ ತಿಳಿಸಿದ್ದಾಳೆ.
ಬಾಲಕಿಯ ಹೇಳಿಕೆ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಲೂರು ಉಪನಗರ ಠಾಣೆಗೆ ದೂರು ಸಲ್ಲಿಸಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸದ್ಯ ಈ ಕುರಿತು ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ